Rameshwaram: ರಾಮನವಮಿ ದಿನ ಪಾಂಬನ್ ಬ್ರಿಡ್ಜ್ ಉದ್ಘಾಟನೆ;

Rameshwaram: ಏ.6ರಂದು ರಾಮನವಮಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಿಂದೂಗಳ ಪವಿತ್ರ ಕ್ಷೇತ್ರ ರಾಮೇಶ್ವರಂ ಅನ್ನು ಸಂಪರ್ಕಿಸುವ ನೂತನ ಪಾಂಬನ್ ರೈಲು ಸೇತುವೆಯನ್ನು ಉದ್ಘಾಟಿಸಲಿದ್ದಾರೆ. ಇದೇ ವೇಳೆ ರಾಮೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಲಿದ್ದಾರೆ.
ಈ ಹಿಂದೆ 1914ರಲ್ಲಿ ನಿರ್ಮಿತ ರೈಲ್ವೆ ಸೇತುವೆಯ ಮೂಲಕ ರಾಮೇಶ್ವರಂಗೆ ರೈಲು ಸಂಪರ್ಕ ಕಲ್ಪಿಸಲಾಗಿತ್ತು. ಆದರೆ ಆಸೇತುವೆ ಶಿಥಿಲಗೊಂಡ ಕಾರಣ 2022ರಲ್ಲಿ ರೈಲು ಸಂಪರ್ಕ ಕಡಿತಗೊಳಿಸಲಾಗಿತ್ತು. ಅದರ ಸಮೀಪದಲ್ಲೇ ಹೊಸ ಸೇತುವೆ ನಿರ್ಮಾಣ ಕಾರ್ಯ ನಡೆದು ಇದೀಗ ಪೂರ್ಣಗೊಂಡಿದೆ.
ಈಗಾಗಲೇ ಈ 2.5 ಕಿ.ಮೀ. ಉದ್ದದ ಸೇತುವೆಯಲ್ಲಿ ರೈಲುಗಳ ಪ್ರಾಯೋಗಿಕ ಸಂಚಾರ ಆರಂಭವಾಗಿದೆ. ಅಂದು ರೈಲು ಸಂಚಾರಕ್ಕೂ ಮೋದಿ ಅವರು ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಇದರಿಂದ ಕೇವಲ 5 ನಿಮಿಷದಲ್ಲಿ ಮುಖ್ಯ ಭೂಮಿಯಿಂದ ರಾಮೇಶ್ವರ ತಲುಪಬಹುದಾಗಿದೆ. ಹಳೇ ಸೇತುವೆಯಲ್ಲಿ 25 ನಿಮಿಷ ಹಿಡಿಯುತ್ತಿತ್ತು.
ಸೇತುವೆ ವೈಶಿಷ್ಟ್ಯ: ಇದು ಭಾರತದ ಮೊದಲ ವರ್ಟಿಕಲ್ ರೈಲ್ವೆ ಬ್ರಿಡ್ಜ್ ಆಗಲಿದೆ. ಸಮುದ್ರ ಮಾರ್ಗದಲ್ಲಿ ಹಡಗುಗಳ ಸಂಚಾರ ವೇಳೆ ಸೇತುವೆಯು ಮೇಲಕ್ಕೆತ್ತಲ್ಪಟ್ಟು, ಬಳಿಕ ಅದು ಸ್ವಸ್ಥಾನಕ್ಕೆ ಮರಳಿ ರೈಲು ಸಂಚಾರಕ್ಕೆ ಅನುವು ಮಾಡಿಕೊಡುವ ವ್ಯವಸ್ಥೆ ಇದೆ.
Comments are closed.