of your HTML document.

Dharmasthala: ಧರ್ಮಸ್ಥಳ ಬಂದ್: ಸುಳ್ಳು ಆರೋಪದ ಬಗ್ಗೆ ಅಣ್ಣಪ್ಪ ಸ್ವಾಮಿ ಮುಂದೆ ಗ್ರಾಮಸ್ಥರು, ಉದ್ಯೋಗಿಗಳಿಂದ ಕಾಯಿ ಒಡೆದು ಪ್ರಾರ್ಥನೆ!

ಧರ್ಮಸ್ಥಳದ ಬಳಿಯ ನೇತ್ರಾವತಿಯಲ್ಲಿ ಭೀಕರವಾದ ಅತ್ಯಾಚಾರಕ್ಕೊಳಗಾಗಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಸೌಜನ್ಯ ಪ್ರಕರಣ ಇಂದಿಗೂ ಬಗೆಹರಿದಿಲ್ಲ. ಇದರ ನಡುವೆ ಕೆಲವು ಸಮಯದ ಹಿಂದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯು ಟ್ಯೂಬರ್ ಸಮೀರ್ ಎಂಡಿ ಮಾಡಿದ ವಿಡಿಯೋ ಬೃಹತ್ ಮಟ್ಟದಲ್ಲಿ ವೈರಲ್ ಆಗಿತ್ತು. ರಾಜ್ಯಾದ್ಯಂತ ಈ ವಿಡಿಯೋ ಕುರಿತು ಪರ ವಿರೋಧಗಳ ಚರ್ಚೆಯಾಗುತ್ತಿದೆ. ಮರೆತು ಹೋಗಿದ್ದಂತಹ ಪ್ರಕರಣ ಮತ್ತೆ ಮುನ್ನಲೆಗೆ ಬಂದಿತ್ತು. ಮತ್ತೆ ರಾಜ್ಯಾದ್ಯಂತ ಕೆಲವು ಸಂಘಟನೆಗಳು ಎಚ್ಚೆತ್ತುಕೊಂಡು ಈ ಕುರಿತಾಗಿ ಹೋರಾಟವನ್ನು ಮುನ್ನಡೆಸಿದ್ದವು. ಮತ್ತೆ ಈ ವಿಚಾರಕ್ಕೆ ಧರ್ಮಸ್ಥಳ ಹಾಗೂ ಹೆಗ್ಗಡೆಯವರ ಕುಟುಂಬವನ್ನು ಎಳೆದು ತರಲಾಗಿತ್ತು ಎನ್ನುತ್ತಿರುವ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಸುಳ್ಳು ಆರೋಪ ಹೊರಿಸಿ, ಕ್ಷೇತ್ರದ ಮಾನಹಾನಿ ಮಾಡುವ ಸ್ಥಾಪಿತ ಹಿತಾಸಕ್ತಿಗಳ ವಿರುದ್ಧ ಅಗತ್ಯ ಕಾನೂನು ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನಾ ಸಭೆಯು ಇಂದು ಧರ್ಮಸ್ಥಳದ ಅಣ್ಣಪ್ಪ ಬೆಟ್ಟದ ಎದುರು ನೇರವೇರಿತು.

ನೂರಾರು ಸಂಖ್ಯೆಯಲ್ಲಿ ಸೇರಿದ್ದ ಕೆಲ ಭಕ್ತರು ಮತ್ತು ಗ್ರಾಮಸ್ಥರು ಹಾಗೂ ಧರ್ಮಸ್ಥಳದ ಹಲವು ಸಂಸ್ಥೆಗಳ ಉದ್ಯೋಗಿಗಳು ಸೇರಿ ಅಣ್ಣಪ್ಪ ಸ್ವಾಮಿಯ ಬೆಟ್ಟದ ಎದುರು ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಳೆದ ಕೆಲ ದಿನಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಯೂಟ್ಯೂಬ್, ಫೇಸ್‌ಬುಕ್ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ತೀರಾ ಅವಹೇಳನಕಾರಿಯಾದ ಆಧಾರರಹಿತ ಮಾಹಿತಿಗಳು ಹರಿದಾಡುತ್ತಿದ್ದು ಇದರಿಂದ ನಮ್ಮ ಗ್ರಾಮದ ಘನತೆಗೆ ಹಾನಿಯಾಗಿದೆ. ಆದರೆ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅವಹೇಳನೆ ಷಡ್ಯಂತ್ರಗಳನ್ನು ಮಾಡಿದಲ್ಲಿ ಯಾವ ಬೆಲೆ ತೆತ್ತಾದರೂ ನಮ್ಮ ಗ್ರಾಮದ ನಮ್ಮ ಕ್ಷೇತ್ರದ ಗೌರವ ಘನತೆ, ಉಳಿಸುವಲ್ಲಿ ಬದ್ಧರಾಗಿದ್ದೇವೆ ಎನ್ನುವ ಪ್ರಾರ್ಥನೆ ಮಾಡಲಾಯಿತು.

ಸೌಜನ್ಯಾ ಪ್ರಕರಣ ಮುಂದಿರಿಸಿ, ಕ್ಷೇತ್ರದ ತೇಜೋವಧೆ ಮಾಡಲಾಗುತ್ತಿದೆ. ಸೌಜನ್ಯಾ ಪ್ರಕರಣಕ್ಕೂ ಕ್ಷೇತ್ರಕ್ಕೂ ಯಾವುದೇ ಸಂಬಂಧವಿಲ್ಲ. ವಿನಾಕಾರಣ ಕೆಲವರು ಸೌಜನ್ಯಾ ಪ್ರಕರಣದಲ್ಲಿ ಕ್ಷೇತ್ರದ ತೇಜೋವಧೆ ಮಾಡುತ್ತಿದ್ದಾರೆ. ಇವರ ಈ ಕುಕೃತ್ಯ ಧರ್ಮಸ್ಥಳ ಗ್ರಾಮದವರಾದ ನಮಗೂ ಮುಜುಗರ ತರುವಂತೆ ಮಾಡಿದೆ. ಸೌಜನ್ಯಾ ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ನಾವು ಧರ್ಮಸ್ಥಳ ಗ್ರಾಮದ ನಿವಾಸಿಗರು ಆರಂಭದಿಂದಲೂ ಆಗ್ರಹಿಸುತ್ತಾ ಬಂದಿದ್ದೇವೆ. ಆದರೆ ಇದೇ ವಿಚಾರವನ್ನು ಮುಂದಿಟ್ಟು ಸಂವಿಧಾನ ಬಾಹಿರವಾಗಿ ಕ್ಷೇತ್ರದ ತೇಜೋವಧೆ ಮಾಡುವುದನ್ನು ನಾವು ಧರ್ಮಸ್ಥಳ ಗ್ರಾಮಸ್ಥರು ಉಗ್ರವಾಗಿ ಖಂಡಿಸುತ್ತೇವೆ ಎಂದು ತೆಂಗಿನ ಕಾಯಿ ಒಡೆದು ಪ್ರಾರ್ಥಿಸಲಾಯಿತು.

ಬಳಿಕ ಕ್ಷೇತ್ರದ ಅಮೃತವರ್ಷಿಣಿ ಸಭಾಂಗಣದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಸಾಕ್ಷಾಧಾರಗಳಿಲ್ಲದೇ ಮನಬಂದಂತೆ ಮಾತನಾಡಿ, ಸುಳ್ಳು ಆರೋಪ ಹೊರಿಸಿ, ಕ್ಷೇತ್ರದ ಮಾನಹಾನಿ ಮಾಡುವ ಮೂಲಕ ಧರ್ಮಸ್ಥಳ ಗ್ರಾಮದ ನಿವಾಸಿಗಳಿಗೆ ಮುಜುಗರ ತರುತ್ತಿರುವ ಸ್ಥಾಪಿತ ಹಿತಾಸಕ್ತಿಗಳ ವಿರುದ್ಧವೂ ಅಗತ್ಯ ಕಾನೂನು ಕ್ರಮವಾಗಬೇಕು ಎಂದು ಅಗ್ರಹಿಸಲಾಯಿತು.

ಇನ್ನು ಧರ್ಮಸ್ಥಳದಲ್ಲಿ ಬಂದ್‌ ನಡೆಸಲಾಗಿದೆ. ಧರ್ಮಸ್ಥಳದಲ್ಲಿ ಅಂಗಡಿ, ಮುಂಗಟ್ಟು ಬಂದ್‌ ಇದ್ದು, ವಾಹನ ಸಂಚಾರವನ್ನು ಕೂಡಾ ಸ್ಥಗಿತಗೊಳಿಸಲಾಗಿದೆ. ಅಣ್ಣಪ್ಪ ಸ್ವಾಮಿ ಬೆಟ್ಟದ ಬಳಿ ಹಾಗೂ ಅಮೃತವರ್ಷಿಣಿ ಸಭಾಭವನದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

Comments are closed.