Bengaluru: ಬೆಂಗಳೂರು: ಪೂಜೆ ನೆಪದಲ್ಲಿ ಮಹಿಳೆಗೆ 1 ಕೋಟಿ ರೂ. ವಂಚಿಸಿದ ಜ್ಯೋತಿಷಿ

Bengaluru: ಪೂಜೆ ಮಾಡಿ ಸಮಸ್ಯೆಗಳನ್ನು ಪರಿಹರಿಸುವ ಹೆಸರಿನಲ್ಲಿ ವಿವಾಹಿತ ಮಹಿಳೆಯೊಬ್ಬರಿಗೆ ವಂಚಿಸಿದ್ದ ಆರೋಪದಡಿ ಕಿರಣ್ ಗುರೂಜಿ ಹಾಗೂ ಲೋಹಿತ್ ಎಂಬುವವರ ವಿರುದ್ಧ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಮಹಿಳೆಯೊಬ್ಬರು ನೀಡಿದ ದೂರು ಆಧರಿಸಿ, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ಪತಿ ವಿದೇಶದಲ್ಲಿ ನೆಲೆಸಿದ್ದಾರೆ. ಮಹಿಳೆ ತಮ್ಮ ತಂದೆಯೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಮೂರು ವರ್ಷಗಳ ಹಿಂದೆ ಪರಿಚಯವಾಗಿದ್ದ ಕಿರಣ್ ಕುಮಾರ್ ಎಂಬ ಜ್ಯೋತಿಷಿ, ನಿಮ್ಮ ಕುಟುಂಬದ ಮೇಲೆ ವಾಮಾಚಾರ ಪ್ರಯೋಗವಾಗಿದೆ. ಪರಿಹಾರ ಮಾಡದಿದ್ದರೆ ನಿಮ್ಮ ಪತಿಯ ಜೀವಕ್ಕೆ ಅಪಾಯವಿದೆ ಎಂದು ಹೆದರಿಕೆ ಹುಟ್ಟಿಸಿದ್ದ. ಜ್ಯೋತಿಷಿ ಮಾತಿನಿಂದ ಮಹಿಳೆ ಹೆದರಿದ್ದರು.
ನಂತರ ಪೂಜೆಯ ನೆಪದಲ್ಲಿ ಇಬ್ಬರೂ ಹಂತ, ಹಂತವಾಗಿ ಸಾಕಷ್ಟು ಪ್ರಮಾಣದಲ್ಲಿ ಹಣ ವಸೂಲಿ ಮಾಡಿದ್ದಾರೆ. ರೂ.1 ಕೋಟಿಗೂ ಅಧಿಕ ಹಣ ಹಾಗೂ ದೇವರಿಗೆ ಅರ್ಪಿಸಬೇಕೆಂದು 80 ಗ್ರಾಂ. ರುದ್ರಾಕ್ಷಿ ಹಾರ, 5 ಗ್ರಾಂ. ಚಿನ್ನದ ಉಂಗುರ ಸೇರಿದಂತೆ ಅಭರಣಗಳನ್ನು ಜ್ಯೋತಿಷಿ ಪಡೆದಿದ್ದಾನೆ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ. ಸಮಸ್ಯೆ ಪರಿಹಾರವಾಗದ ಕಾರಣ, ಹಣ ಹಾಗೂ ಆಭರಣ ವಾಪಸ್ ನೀಡುವಂತೆ ಮಹಿಳೆ ಕೇಳಿದ್ದರು. ಆಗ ಕಿರಣ್ ಕುಮಾರ್ ಗುರೂಜಿ ಹಾಗೂ ಲೋಹಿತ್ ಅವಾಚ್ಯ ಪದಗಳಿಂದ ನಿಂದಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
Comments are closed.