Education Department: ಶಾಲಾ-ಕಾಲೇಜು ಮಕ್ಕಳಿಗೆ ಇನ್ನು ಲೈಂಗಿಕ ಶಿಕ್ಷಣ, ಇಲಾಖೆಯಿಂದ ಮಹತ್ವದ ನಿರ್ಧಾರ

 

Education Department: ಶಾಲಾ ಕಾಲೇಜು ಮಕ್ಕಳಿಗೆ ಇನ್ನು ಮುಂದೆ ಲೈಂಗಿಕ ಶಿಕ್ಷಣವನ್ನು ನೀಡಲು ರಾಜ್ಯ ಶಿಕ್ಷಣ ಇಲಾಖೆಯ ಮಹತ್ವದ ನಿರ್ಧಾರವನ್ನು ಮಾಡಿದೆ. ಈ ಕುರಿತಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಬಿಗ್ ಅಪ್ಡೇಟ್ ನೀಡಿದ್ದಾರೆ.

 

ವಿಧಾನ ಪರಿಷತ್‌ನಲ್ಲಿ ಹದಿಹರೆಯದ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳ ಕುರಿತು ಇತ್ತೀಚೆಗೆ ಸುದೀರ್ಘ ಚರ್ಚೆ ನಡೆದಿತ್ತು. ಈ ವೇಳೆ ರಾಜ್ಯದ ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಗೆ 2025-26ನೇ ಶೈಕ್ಷಣಿಕ ಸಾಲಿನಿಂದ ವಾರದಲ್ಲಿ ಎರಡು ಅವಧಿಯಲ್ಲಿ ನೈತಿಕ ಮೌಲ್ಯದ ಶಿಕ್ಷಣ ಬೋಧನೆಯನ್ನು ಕಡ್ಡಾಯವಾಗಿ ಜಾರಿಗೆ ತರಲು ತೀರ್ಮಾನಿಸಲಾಗಿದೆ. ಜೊತೆಗೆ ಈ ಸಂಬಂಧ ಪರೀಕ್ಷೆಯನ್ನೂ ನಡೆಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

 

ಅಲ್ಲದೆ ನೈತಿಕ ಮೌಲ್ಯದ ಶಿಕ್ಷಣದ ಜೊತೆಗೆ ಮಕ್ಕಳ ವಯೋಮಾನಕ್ಕೆ ಅನುಗುಣವಾಗಿ 8ರಿಂದ 12ನೇ ತರಗತಿ ಮಕ್ಕಳಿಗೆ ಕಡ್ಡಾಯವಾಗಿ ವಾರದಲ್ಲಿ 2 ದಿನ ಲೈಂಗಿಕ ಶಿಕ್ಷಣ ನೀಡಲಾಗುವುದು. ಲೈಂಗಿಕ ಶಿಕ್ಷಣ ಎಂದರೆ ತಪ್ಪಾಗಿ ಭಾವಿಸುವಂತಿಲ್ಲ. ಮಕ್ಕಳ ವಯಸ್ಸಿಗೆ ಅನುಗುಣವಾಗಿ ದೇಹದಲ್ಲಿ ಬಿಡುಗಡೆಯಾಗುವ ಹಾರ್ಮೋನುಗಳು, ಸಹಜವಾಗಿ ಆಗುವ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬದಲಾವಣೆಗಳು, ಅವುಗಳೆಲ್ಲವನ್ನೂ ಸಹಜ ರೀತಿಯಲ್ಲಿ ಸ್ವೀಕರಿಸುವ ಮತ್ತು ಸೂಕ್ತ ರೀತಿಯಲ್ಲಿ ಎದುರಿಸುವ/ನಿರ್ವಹಿಸುವ ಮನೋಭಾವ ಬೆಳೆಸುವ ಕೆಲಸ ಆಗಲಿದೆ. ಈ ವಿಚಾರಗಳಲ್ಲಿ ವೈದ್ಯರೊಂದಿಗೆ ವರ್ಷದಲ್ಲಿ ಎರಡು ಬಾರಿ ಸಮಾಲೋಚನೆ, ಸಂವಾದ, ಉಪನ್ಯಾಸ ಏರ್ಪಡಿಸುವ ಮೂಲಕ ತಿಳಿವಳಿಕೆ ನೀಡುವ ಕೆಲಸ ಮಾಡಲಾಗುವುದು ಎಂದು ವಿವರಿಸಿದ್ದಾರೆ.

Comments are closed.