Madikeri: ಕೆರೆಯ ಕೆಸರಿನಲ್ಲಿ ಸಿಲುಕಿ ಬಾಲಕಿ ದುರ್ಮರಣ

Share the Article

Madikeri: ಆಟವಾಡಲೆಂದು ಕೆರೆಗೆ(Lake) ಹಾರಿದ ಬಾಲಕಿಯೊಬ್ಬಳು(Girl) ಮೇಲಕ್ಕೆ ಬರಲಾಗದೇ ಉಸಿರು ಚೆಲ್ಲಿರುವ ದಾರುಣ ಘಟನೆ ಗೋಣಿಕೊಪ್ಪಲು ಸಮೀಪದ ಅತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಂಗೊಲ್ಲಿಯಲ್ಲಿ ನಡೆದಿದೆ.

ಅಲ್ಲಿನ ಕಾಫಿ ಬೆಳೆಗಾರ ಕೆ.ಕೆ. ತಿಮ್ಮಯ್ಯ ಎಂಬುವವರಿಗೆ ಸೇರಿದ ಕೆರೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದು ತೋಟದ ಕಾರ್ಮಿಕರಾಗಿರುವ ಭವಾನಿ ಎಂಬುವವರ ಒಂಬತ್ತು ವರ್ಷ ಪ್ರಾಯದ ಪುತ್ರಿಯೇ ಕ್ರೂರ ವಿಧಿಯ ಅಟ್ಟಹಾಸಕ್ಕೆ ಸಿಲುಕಿ ಕೆರೆಗೆ ಹಾರವಾದ ನತದೃಷ್ಟಳಾಗಿದ್ದಾಳೆ.

ತನ್ನ ಸಹಪಾಠಿಗಳೊಂದಿಗೆ ಕೆರೆಯ ಬದಿಯಲ್ಲಿ ಆಟವಾಡುತ್ತಿದ್ದ ಸಂದರ್ಭ ಈಕೆ ಹಾಗೂ ಇನ್ನಿಬ್ಬರು ಮಕ್ಕಳು ಕೆರೆಗೆ ಹಾರಿದ್ದಾರೆ ಎಂದು ಹೇಳಲಾಗಿದೆ. ಆದರೆ ಕೆರೆಯಲ್ಲಿ ನೀರು ಬತ್ತಿ ಕೆಸರು ತುಂಬಿದ್ದರಿಂದ ಮೂವರು ಅದರೊಳಗೆ ಸಿಲುಕಿ ಬೊಬ್ಬಿಟ್ಟಿದ್ದಾರೆ. ವಿಷಯ ಅರಿತು ಸ್ಥಳಕ್ಕೆ ಧಾವಿಸಿ ಬಂದ ಕಾರ್ಮಿಕರು ಇಬ್ಬರನ್ನು ರಕ್ಷಿಸಿದ್ದಾರೆ. ಈ ಬಾಲಕಿಯನ್ನು ಕೆಸರಿಂದ ಹೊರಕ್ಕೆ ತರುವ ಪ್ರಯತ್ನ ವಿಫಲವಾದ್ದರಿಂದ ಈಕೆ ಅಸು ನೀಗಿದ್ದಾಳೆ.

ಚೆನ್ನಂಗೊಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ ಆಗಿರುವ ಈಕೆ ಇಂದು ವಾರ್ಷಿಕ ಪರೀಕ್ಷೆ ಬರೆಯಬೇಕಾಗಿತ್ತು. ಆದರೆ ವಿಧಿಯೊಡ್ಡಿದ ಪರೀಕ್ಷೆಗೆ ಬಲಿಯಾಗಿರುವುದು ಶೋಚನೀಯವಾಗಿದೆ.

Comments are closed.