Bangalore: ಜೆಸಿಬಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ, ಗರ್ಭಿಣಿ ಮಹಿಳೆ ಸೇರಿ ಇಬ್ಬರು ಸಾವು!

Bangalore: ಸುದ್ದಗುಂಟೆಪಾಳ್ಯ ರಸ್ತೆ ಕಾಮಗಾರಿ ವೇಳೆ ವಿದ್ಯುತ್‌ ಕಂಬ ಮುರಿದು ಬಿದ್ದ ಪರಿಣಾಮ ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೈಯಪ್ಪನಹಳ್ಳಿಯಲ್ಲಿ ನಡೆದಿದೆ. ಸುಮತಿ (35), ಸೋನಿ ಕುಮಾರಿ (35) ಮೃತಪಟ್ಟ ಮಹಿಳೆಯರು. ಇಬ್ಬರು ಮಕ್ಕಳೂ ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ.

ದುರಸ್ತಿ ಕಾಮಗಾರಿ ನಡೆಯುತ್ತಿದ್ದಾಗ ಜೆಸಿಬಿ ವಾಹನ ಹಿಮ್ಮುಖವಾಗಿ ಚಲಿಸಿದ್ದು, ರಸ್ತೆ ಬದಿಯ ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾಗಿದೆ. ಆಗ ರಸ್ತೆಯಲ್ಲಿ ನಡೆದು ಬರುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ಕಂಬ ಬಿದ್ದಿದ್ದು, ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತ ಹೊಂದಿದ್ದಾರೆ.

ಬಿಹಾರ ಮೂಲದ ಸೋನಿ ಕುಮಾರಿ ಎಂಟು ವರ್ಷಗಳಿಂದ ತನ್ನ ಇಬ್ಬರು ಮಕ್ಕಳ ಜೊತೆ ಬೆಂಗಳೂರಿನಲ್ಲಿದ್ದರು. ಈಕೆ ನಾಲ್ಕು ತಿಂಗಳ ಗರ್ಭಿಣಿ ಎನ್ನಲಾಗಿದೆ. ಸುಮತಿ ತಮಿಳುನಾಡು ಮೂಲದವರು. ಈಕೆ ಪತಿ ಹಾಗೂ ತನ್ನ ಇಬ್ಬರು ಮಕ್ಕಳ ಜೊತೆ ಸುದ್ದಗುಂಟೆಪಾಳ್ಯದಲ್ಲಿ ನೆಲೆಸಿದ್ದರು. ಸೋಮವಾರ ಸಂಜೆ ತಮ್ಮ ಮಕ್ಕಳನ್ನು ಟ್ಯೂಷನ್‌ನಿಂದ ಕರೆದುಕೊಂಡು ಬರುತ್ತಿರುವಾಗ ಈ ದುರ್ಘಟನೆ ನಡೆದಿದೆ.

ಬೈಯ್ಯಪ್ಪನಹಳ್ಳಿ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ, ಜೆಸಿಬಿ ಯಂತ್ರವನ್ನು ಜಪ್ತಿ ಮಾಡಿದ್ದಾರೆ. ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.

Comments are closed.