ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ: ಸಚಿವರು ಕೊಟ್ಟ ಜಾರಿ ದಿನಾಂಕದ ಮಾಹಿತಿ

Bengaluru: ರಾಜ್ಯ ಸರ್ಕಾರಿ ನೌಕರರು ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನೇ ಮತ್ತೆ (ಒಪಿಎಸ್) ಮರು ಜಾರಿಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಮುಖ್ಯಮಂತ್ರಿಯವರು ಮಾರ್ಚ್ 7 ರಂದು ಮಂಡಿಸಿದ ಬಜೆಟ್‌ನಲ್ಲಿ ಹಳೆ ಪಿಂಚಣಿ ಯೋಜನೆ ಘೋಷಣೆಯಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅದು ಹುಸಿಯಾಗಿತ್ತು.
ಈ ಕುರಿತು ಸಿಎಂ ಸಿದ್ದರಾಮಯ್ಯ ಪರ ವಿಧಾನ ಪರಿಷತ್‌ನಲ್ಲಿ ಸಭಾ ನಾಯಕ ಬೋಸರಾಜು ಉತ್ತರ ನೀಡಿದ್ದಾರೆ. ಹೊಸ ಪಿಂಚಣಿ ಯೋಜನೆ ಬದಲಿಗೆ ಸರ್ಕಾರಿ ನೌಕರಿಗೆ ಓಪಿಎಸ್ ಜಾರಿ ಮಾಡುತ್ತೇವೆ. ಯಾವಾಗ ಮಾಡುತ್ತೇವೆ ಎಂದು ಸಮಯ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಪ್ರಶ್ನೋತ್ತರ ಕಲಾಪ ಸಂದರ್ಭ, ಕಾಂಗ್ರೆಸ್ ಸದಸ್ಯ ರಾಮೋಜಿಗೌಡೇ ಪ್ರಶ್ನೆ ಕೇಳಿದ್ದರು. ಹಳೆಯ ಓಪಿಎಸ್ ಕೊಡೋದಾಗಿ ಚುನಾವಣೆ ವೇಳೆ ನಮ್ಮ ಪ್ರಣಾಳಿಕೆಯಲ್ಲೂ ಸೇರಿಸಲಾಗಿತ್ತು. ನಮ್ಮ ಸರ್ಕಾರ ಬಂದಾಗ ಓಪಿಎಸ್ ಜಾರಿ ಮಾಡೋದಾಗಿ ಹೇಳಿದ್ದೆವು. ಸರ್ಕಾರ ಬಂದು 1.5 ವರ್ಷ ಆದರೂ ಯಾವುದೇ ನಿರ್ಧಾರ ಆಗಿಲ್ಲ. ಇದು ಸರಿಯಲ್ಲ. ಸರ್ಕಾರ ಸಮಿತಿ ಮಾಡಿದೆ. ಸಮಿತಿಯಿಂದ ನಮಗೇನು ಲಾಭವಿಲ್ಲ. ಓಪಿಎಸ್‌ಗಾಗಿ ಹೋರಾಟ ನಡೆಯುತ್ತಿದೆ. ಕೂಡಲೇ ಓಪಿಎಸ್ ಜಾರಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಸಚಿವ ಬೋಸರಾಜು ಉತ್ತರ ನೀಡಿದ್ದು, ರಾಜ್ಯದಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ಅಡಿ 2,86,445 ಸರ್ಕಾರಿ ನೌಕರರು ಒಳಪಟ್ಟಿದ್ದಾರೆ. ಓಪಿಎಸ್ ಜಾರಿ ಮಾಡಲು ಸಮಿತಿ ರಚನೆ ಮಾಡಲಾಗಿದೆ. ಈಗಾಗಲೇ ಎರಡು ಸಭೆ ಮಾಡಲಾಗಿದೆ. ಸಮಿತಿಯ ವರದಿಯ ತರುವಾಯ ಪರಿಶೀಲನೆ ಮಾಡಿ ಓಪಿಎಸ್ ಜಾರಿ ಮಾಡೋ ಬಗ್ಗೆ ನಿರ್ಧಾರ ಮಾಡುತ್ತೇವೆ. ಓಪಿಎಸ್ ಕಾಲಮಿತಿ ನೀಡಲು ಆಗಲ್ಲ. ಇಷ್ಟೇ ಸಮಯದ ಒಳಗೆ ಕೊಡುತ್ತೇವೆ ಎಂದು ಹೇಳಲು ಆಗಲ್ಲ. ಆದಷ್ಟು ಬೇಗ ಈ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಗೃಹ ಸಚಿವ ಸಚಿವ ಪರಮೇಶ್ವರ್ ಮಾತಾಡಿ, ಪ್ರಣಾಳಿಕೆ ಬರೆಯೋವಾಗ ಚರ್ಚೆ ಮಾಡಿ ಇದನ್ನ ಸೇರಿಸಿದ್ದೇವೆ. ನಾವು ಕಮಿಟ್ ಆಗಿದ್ದೇವೆ. ನಾವು ಕೊಟ್ಟ ಭರವಸೆ ಈಡೇರಿಸುತ್ತೇವೆ. ಇದಕ್ಕೆ ಕೋಟ್ಯಂತರ ರುಪಾಯಿ ಖರ್ಚು ಆಗುತ್ತದೆ. ಆದರೆ ನಾವು ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
Comments are closed.