Udupi: ಪೊಲೀಸರಿಂದ ಗುಂಡೇಟು ತಿಂದ ಇಸಾಕ್‌ ಜಿಲ್ಲಾ ಆಸ್ಪತ್ರೆಗೆ; ಮೂವರಿಗೆ ನ್ಯಾಯಾಂಗ ಬಂಧನ

Share the Article

Udupi: ಹಾಸನದಲ್ಲಿ ಬಂಧಿಸಲ್ಪಟ್ಟು ಉಡುಪಿಗೆ ಕರೆ ತರುವ ಸಂದರ್ಭದಲ್ಲಿ ಹಿರಿಯಡ್ಕ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪರಾರಿಯಾಗಲೆತ್ನಿಸಿ ಪೊಲೀಸರಿಂದ ಗುಂಡೇಟು ತಿಂದು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಇಸಾಕ್‌ನನ್ನು ಉಡುಪಿ ಜಿಲ್ಲಾಸ್ಪತ್ರೆಗೆ ಗುರುವಾರ ಸ್ಥಳಾಂತರ ಮಾಡಲಾಗಿದೆ.

ವೈದ್ಯರಿಂದ ದೃಢೀಕರಣ ಪತ್ರ ಪಡೆದ ಬಳಿಕ ಆತನನ್ನು ನ್ಯಾಯಾಧೀಶರ ಎದುರು ಹಾಜರು ಪಡಿಸಲಾಗುತ್ತದೆ. ಹಾಗೂ ಇತ್ತ ಕಡೆ ಗಾಯಗೊಂಡ ಪೊಲೀಸರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇತರ ಆರೋಪಿಗಳಾದ ಸುರತ್ಕಲ್‌ನ ರಾಹಿದ್‌ (25), ಕೇರಳದ ಸಾಮಿಲ್‌ (26) ಹಾಗೂ ನಿಜಾಮುದ್ದೀನ್‌ (25) ನನ್ನು ವಿಚಾರಣೆ ಮಾಡಿದ್ದು, ನ್ಯಾಯಾಲಯದ ಎದುರು ಹಾಜರು ಮಾಡಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಗರುಡ ಗ್ಯಾಂಗ್‌ನ ಸದಸ್ಯರು ಇವರೆಲ್ಲರೂ ಎನ್ನಲಾಗಿದೆ.

ಶೂಟೌಟ್‌ ಪ್ರಕರಣಕ್ಕೆ ಕುರಿತು ತನಿಖಾಧಿಕಾರಿ ಬ್ರಹ್ಮಾವರ ವೃತ್ತ ನಿರೀಕ್ಷಕ ದಿವಾಕರ್‌ ಅವರಿಂದ ಸ್ಥಳ ಮಹಜರು ನಡೆಯಿತು. ಮೂರು ಸುತ್ತು ಗಾಳಿಯಲ್ಲಿ ಹಾಗೂ ಎರಡು ಸುತ್ತು ಇಸಾಕ್‌ ಮೇಲೆ ಗುಂಡು ಹಾರಿಸಲಾಗಿದೆ. ಈ ಪೈಕಿ ಒಂದು ಗುಂಡು ಇಸಾಕ್‌ನ ಎಡ ಕಾಲಿಗೆ ತಗುಲಿದೆ.

ಗುಂಡೇಟಿಗೆ ಒಳಗಾಗಿರುವ ಇಸಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಂಡ ನಂತರ ಆತನನ್ನು ಸ್ಥಳಕ್ಕೆ ಕರೆತಂದು ಸ್ಥಳ ಮಹಜರು ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.