Theft: ಮೂಗುತಿ ಖರೀದಿಗೆ ಬಂದ ಮಹಿಳೆ, ಖರೀದಿಸುವ ಬದಲು ಬಾಯಿಗೆ ತುಂಬಿಸಿದಳು; ವಿಡಿಯೋ ವೈರಲ್ ‌

Theft: ಚಿನ್ನ ಖರೀದಿ ಮಾಡುವ ನೆಪದಲ್ಲಿ ಮಹಿಳೆಯೊಬ್ಬಳು ಬುಧವಾರ ಚಿನ್ನದಂಗಡಿಗೆ ಬಂದಿದ್ದು, ಬಾಯಿ ತುಂಬಾ ಚಿನ್ನ ತುಂಬಿಸಿ ಸಿಕ್ಕಿ ಬಿದ್ದಿರುವ ಘಟನೆ ಪಾಟ್ನಾದ ನಳಂದದಲ್ಲಿ ನಡೆದಿದ್ದು, ಮಹಿಳೆಯ ಕೃತ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ವೈರಲ್‌ ಆಗುತ್ತಿದೆ.


ಸಣ್ಣ ಆಭರಣದ ಅಂಗಡಿಗೆ ಕೆಂಪು ಬಣ್ಣದ ಸೀರೆ ಉಟ್ಟ ಮಹಿಳೆ ಮೂಗುತಿ ತೋರಿಸಲು ಹೇಳಿದ್ದಾರೆ. ಅದರಂತೆ ಸಿಬ್ಬಂದಿ ಬಗೆ ಬಗೆಯ ಮೂಗುತಿಗಳನ್ನು ತೋರಿಸಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆ ಒಂದೊಂದೇ ತೆಗೆದು ಮೂಗಿಗೆ ಮೂಗುತಿ ಇಟ್ಟು ಸಿಬ್ಬಂದಿ ಬೇರೆ ಕಡೆಗೆ ಗಮನ ಹರಿಸಿದ ವೇಳೆ ಅದನ್ನು ಬಾಯಿಯೊಳಗೆ ಹಾಕಿ ಬೇರೆ ಮೂಗುತಿಯನ್ನು ಪರಿಶೀಲಿಸುವ ಕೆಲಸ ಮಾಡುತ್ತಿದ್ದಳು.

ಅಂಗಡಿಯಲ್ಲಿ ಅಂದು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬಂದಿದ್ದರು. ಅಲ್ಲಿ ಒಟ್ಟು ಮೂವರು ಸಿಬ್ಬಂದಿಗಳಿದ್ದರು. ಕೆಂಪು ಸೀರೆಯುಟ್ಟ ಮಹಿಳೆ ಇದೇ ರೀತಿ ನಾಲ್ಕೈದು ಮೂಗುತಿಯನ್ನು ಸಿಬ್ಬಂದಿಯ ಕಣ್ಣು ತಪ್ಪಿಸಿ ತನ್ನ ಬಾಯಿಯೊಳಗೆ ಹಾಕಿದ್ದಾಳೆ. ನಂತರ ಇದ್ಯಾವುದೂ ಬೇಡ ಎಂದು ಹೊರಡಲು ಅನುವಾದಾಗ ಸಿಬ್ಬಂದಿ ಮೂಗುತಿಗಳನ್ನು ಪರಿಶೀಲನೆ ಮಾಡಿದ್ದಾನೆ.

ಮೂಗುತಿ ಸಂಖ್ಯೆ ಕಡಿಮೆ ಇದ್ದಿರುವುದು ಗಮನಕ್ಕೆ ಬಂದಿದೆ. ಮಹಿಳೆಯಲ್ಲಿ ವಿಚಾರಿಸಿದಾಗ ಆಕೆ ನನಗೆ ಗೊತ್ತಿಲ್ಲ ಎಂದು ಸನ್ನೆ ಮೂಲಕ ಹೇಳಿದ್ದಾಳೆ. ಆದರೂ ಸಿಬ್ಬಂದಿಗೆ ಅನುಮಾನ ಬಂದು ಅಂಗಡಿಯ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಮಹಿಳೆ ಒಂದೊಂದೇ ಮೂಗುತಿ ಬಾಯಿಯೊಳಗೆ ಹಾಕಿರುವುದು ತಿಳಿದು ಬಂದಿದೆ.

ಕೂಡಲೇ ಬಾಯಿ ಪರಿಶೀಲನೆ ಮಾಡಿದಾಗ ಚಿನ್ನ ಇರುವುದು ಗೊತ್ತಾಗಿದೆ. ನಂತರ ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪೊಲೀಸರು ಎಚ್ಚರಿಕೆ ನೀಡಿ ಮಹಿಳೆಯನ್ನು ಕಳುಹಿಸಿಕೊಟ್ಟಿದ್ದಾರೆ.

Comments are closed.