Tumakuru: ಪ್ರಮಾಣಿಕತೆ ಮೆರೆದ ಆಟೋ ಚಾಲಕ: ಪ್ರಯಾಣಿಕರ ಚಿನ್ನ ಮರಳಿಸಿದ ಚಾಲಕ

Share the Article

Tumakuru: ಆಟೋ ಚಾಲಕರೊಬ್ಬರು ಪ್ರಮಾಣಿಕತೆ ತೋರಿದ ಅಪರೂಪದ ಘಟನೆ ತುಮಕೂರು (Tumakuru) ಜಿಲ್ಲೆಯಲ್ಲಿ ನಡೆದಿದೆ. ಹನುಮಂತಪುರದ ನಿವಾಸಿ ರವಿಕುಮಾ‌ರ್ ಪ್ರಮಾಣಿಕತೆ ಮೆರೆದ ಆಟೋ ಚಾಲಕ.

ಹಾಸನ ಜಿಲ್ಲೆಯ ಅರಸೀಕೆರೆ ಮೂಲದ ಗಾಯತ್ರಿ ಕುಂದೂರಿನಲ್ಲಿನ ತಮ್ಮ ಸಂಬಂಧಿಕರ ಮನೆಗೆ ಸೀಮಂತ ಕಾರ್ಯಕ್ರಮಕ್ಕೆ ತೆರಳಿದ್ದರು. ಗಾಯತ್ರಿ, ತುಮಕೂರು ಹೊರವಲಯದ ಕುಂದೂರಿನಿಂದ ಸಿಟಿ ಬಸ್‌ ನಿಲ್ದಾಣಕ್ಕೆ ಹೋಗಿ, ನಂತರ ಆಟೋದಲ್ಲಿ ಪ್ರಯಾಣಿಸಿದ್ದಾರೆ. ಆಟೋದಿಂದ ಇಳಿದು ಹೋಗುವಾಗ ಚಿನ್ನಾಭರಣವಿದ್ದ ಬ್ಯಾಗನ್ನು ಮರೆತು ಆಟೋದಲ್ಲೇ ಬಿಟ್ಟು ಹೋಗಿದ್ದಾರೆ.

ನಂತರ ಬ್ಯಾಗ್‌ ನೋಡಿದ ಆಟೋ ಚಾಲಕ ಬ್ಯಾಗ್‌ನ ಮಾಲೀಕರ ಹುಡುಕಾಟ ನಡೆಸಿದ್ದಾರೆ. ಆದರೆ ಆಟೋ ಚಾಲಕನಿಗೆ ಬ್ಯಾಗ್‌ನ ಮಾಲೀಕರು ಸಿಗದಿದ್ದಾಗ ಪೊಲೀಸ್ ಠಾಣೆಗೆ ಆ ಬ್ಯಾಗ್‌ ಅನ್ನು ಒಪ್ಪಿಸಿದ್ದಾರೆ. ಬಳಿಕ ಶೋಧ ಕಾರ್ಯ ನಡೆಸಿದ ಪೊಲೀಸರು ಬ್ಯಾಗ್‌ನ ಮಾಲೀಕರನ್ನು ಪತ್ತೆ ಮಾಡಿದ್ದಾರೆ. ಬ್ಯಾಗ್‌ನಲ್ಲಿ ಇದ್ದಂತಹ 4 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ಮಾಲೀಕರಾದ ಗಾಯತ್ರಿಗೆ ಒಪ್ಪಿಸಿದ್ದಾರೆ. ಇದಾದ ಬಳಿಕ ಗಾಯತ್ರಿ ಆಟೋ ಚಾಲಕ ರವಿಕುಮಾರ್‌ನ ಪ್ರಮಾಣಿಕತೆಗೆ ಧನ್ಯವಾದ ಹೇಳಿದ್ದಾರೆ. ಘಟನೆ ತುಮಕೂರು ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Comments are closed.