Kumbamela : ಕುಂಭಮೇಳದಿಂದ ಕೋಟ್ಯಾಧಿಪತಿಯಾದ ದೋಣಿ ನಡೆಸುವಾತ – 45 ದಿನಗಳಲ್ಲಿ ಗಳಿಸಿದ ಹಣ ಕೇಳಿದ್ರೆ ಶಾಕ್ ಆಗ್ತೀರಾ

Kumbamela: ವಿಶ್ವದ ಅತಿ ದೊಡ್ಡ ಧಾರ್ಮಿಕ ಉತ್ಸವ 144 ವರ್ಷಕ್ಕೊಮ್ಮೆ ಸಂಭವಿಸುವ ಮಹಾಕುಂಭ ಮೇಳಕ್ಕೆ ಸಾಕ್ಷಿಯಾದ ಪ್ರಯಾಗ್ರಾಜ್ಗೆ ದೇಶ-ವಿದೇಶಗಳಿಂದ ಬಂದ 63ಕೋಟಿಗೂ ಅಧಿಕ ಭಕ್ತಾಧಿಗಳು ಆಗಮಿಸಿ, ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಜನವರಿ 13ರಿಂದ ಶುರುವಾದ ಮಹಾಕುಂಭ ಫೆ.26ರಂದು ಅಂತ್ಯವಾಗಿದೆ. ಅಂದರೆ ಸುಮಾರು ಒಂದುವರೆ ತಿಂಗಳುಗಳ ಕಾಲ ಮಹಾಕುಂಭವು ಅತ್ಯಂತ ವಿಜೃಂಭಣೆಯಿಂದ ನೆರವೇರಿದೆ. ಈ ಕುಂಭಮೇಳದಲ್ಲಿ ಅನೇಕರು ಬದುಕನ್ನು ಕಟ್ಟಿಕೊಂಡಿದ್ದಾರೆ. ಕೆಲವರು ಇದರಿಂದ ಕೋಟ್ಯಾಧಿಪತಿಗಳು ಆಗಿದ್ದಾರೆ. ಈ ಕುರಿತಾಗಿ ಸ್ವತಃ ಯೋಗಿ ಆದಿತ್ಯನಾಥ್ ಅವರೇ ಮಾಹಿತಿ ತೆರೆದಿಟ್ಟಿದ್ದಾರೆ.
ಹೌದು, ಕುಂಭಮೇಳದಲ್ಲಿ ಅನೇಕರ ಬದುಕೇ ಬದಲಾಗಿದೆ. ಜೇನುಗಣ್ಣಿನ ಸುಂದರಿ, ಮೊನಾಲಿಸಾಳ ಬದುಕೆ ಇದಕ್ಕೆ ಉದಾಹರಣೆ. ಅಲ್ಲದೆ ಅಲ್ಲಿನ ವ್ಯಾಪಾರಿಗಳಿಗೆ ಇಡೀ ವರ್ಷ ಆಗುವ ವ್ಯಾಪಾರ ಕೇವಲ ಈ 45 ದಿನಗಳಲ್ಲಿ ನಡೆದಿದೆ. ಹಾಗೆಯೇ ಹಲವರಿಗೆ ಭಾಗ್ಯದ ಬಾಗಿಲು ತೆರೆದ ಈ ಕುಂಭಮೇಳವೂ ದೋಣಿ ಮಾಲೀಕರ ಕುಟುಂಬವೊಂದಕ್ಕೆ ಕೋಟ್ಯಾಧಿಪತಿಯಾಗುವ ಭಾಗ್ಯವನ್ನು ಕರುಣಿಸಿದೆ. ಸ್ವತಃ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಈ ವಿಚಾರವನ್ನು ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಹೇಳಿಕೊಂಡಿದ್ದಾರೆ.
130 ಬೋಟುಗಳನ್ನು ಹೊಂದಿರುವ ಕುಟುಂಬವೊಂದು ಕುಂಭ ಮೇಳದ ನಡೆದ 45 ದಿನದ ಅವಧಿಯಲ್ಲಿ 30 ಕೋಟಿ ಆದಾಯ ಮಾಡಿದೆ ಎಂದು ಯೋಗಿ ಆದಿತ್ಯನಾಥ್ ಅವರು ವಿಧಾನಸಭೆಯಲ್ಲಿ ಹೇಳಿದ್ದಾರೆ. ದೋಣಿ ನಾವಿಕರ ಕುಟುಂಬ ಹೆಚ್ಚು ಸಂಪಾದನೆ ಮಾಡಿಲ್ಲ ಹಾಗೂ ಗಂಗೆಯ ಸ್ವಚ್ಛತೆ ಕಾಪಾಡಿಲ್ಲ ಎನ್ನುತ್ತಿದ್ದ ವಿರೋಧ ಪಕ್ಷ ಸಮಾಜವಾದಿ ಪಾರ್ಟಿಯನ್ನು ಟೀಕಿಸಿದ ಸಿಎಂ ಯೋಗಿ ಆದಿತ್ಯನಾಥ್ ಅವರು ಕುಂಭಮೇಳದಲ್ಲಿ ಇದ್ದ ಸ್ವಚ್ಛತಾ ಕಾರ್ಯಕರ್ತರು ಹಾಗೂ ಆರೋಗ್ಯ ಕಾರ್ಯಕರ್ತರನ್ನು ಗೌರವಿಸಿ ಮಾತನಾಡುತ್ತಾ ಈ ವಿಚಾರ ತಿಳಿಸಿದ್ದಾರೆ.
Comments are closed.