Stadiums: ನ್ಯೂ ರೂಲ್ಸ್‌ – ಕ್ರೀಡಾಂಗಣಗಳನ್ನು ದೀರ್ಘಾವಧಿಗೆ ಬಾಡಿಗೆ ನೀಡುವಂತಿಲ್ಲ- ಸರಕಾರದಿಂದ ಆದೇಶ

Share the Article

Stadiums: ಕರ್ನಾಟಕ ಸರಕಾರವು ಕ್ರೀಡಾಂಗಣ ಬಳಕೆ ನೀತಿಯನ್ನು ಜಾರಿ ಮಾಡಿದೆ. ಕ್ರೀಡಾಂಗಣಗಳನ್ನು ಅನುಮತಿ ಇಲ್ಲದೆ ದೀರ್ಘಾವಧಿಗೆ ಬಾಡಿಗೆಗೆ ನೀಡುವ ಹಾಗಿಲ್ಲ ಅಥವಾ ಇತರೆ ರೀತಿಯಲ್ಲಿ ಕ್ರೀಡಾಂಗಣಗಳನ್ನು ಪರಭಾರೆ ಮಾಡುವಂತಿಲ್ಲ ಎಂದು ಆದೇಶ ನೀಡಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ (The Department Of Youth Empowerment & Sports) ಸುತ್ತೋಲೆಯನ್ನು ಹೊರಡಿಸಿದೆ.

ಮಾರ್ಗಸೂಚಿಯಲ್ಲೇನಿದೆ?
ಜಿಲ್ಲಾ ಕ್ರೀಡಾಂಗಣ ಉಸ್ತುವಾರಿ ಸಮಿತಿ ಹಾಗೂ ಜಿಲ್ಲಾ ಕ್ರೀಡಾಂಗಣ ನಿರ್ವಹಣಾ ಸಮಿತಿಗಳು ಸರ್ಕಾರದ ಪೂರ್ವಾನುಮತಿ ಇಲ್ಲದೇ ಗುತ್ತಿಗೆ/ಹೊರಗುತ್ತಿಗೆ ಸೇರಿದಂತೆ ಯಾವುದೇ ನೇಮಕಾತಿಗಳನ್ನು ಮಾಡುವಂತಿಲ್ಲ.
ಜಿಲ್ಲೆಯ ಯಾವುದೇ ಇಲಾಖಾ ಕ್ರೀಡಾಂಗಣದಲ್ಲಿ 50 ಲಕ್ಷ ರೂ. ವೆಚ್ಚ ಮೀರಿದ ಯಾವುದೇ ಒಂದು ಅಭಿವೃದ್ಧಿ ಕಾರ್ಯವನ್ನು ಅಥವಾ ವಾರ್ಷಿಕ ಒಟ್ಟು 100 ಲಕ್ಷ ರೂ. ಮಿತಿ ಮೇಲ್ಪಟ್ಟ ಕಾಮಗಾರಿ/ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೊದಲು ಇಲಾಖೆಯ ಪೂರ್ವಾನುಮತಿ ಪಡೆಯುವುದು ಕಡ್ಡಾಯ.
ಕ್ರೀಡಾಂಗಣದ ಆಸ್ತಿಗಳನ್ನು ವಾರ್ಷಿಕ ಬಾಡಿಗೆಗೆ ನೀಡುವ ಅಥವಾ ಹೊರಗುತ್ತಿಗೆ ನೀಡುವ ಸಂದರ್ಭದಲ್ಲಿ ಇಲಾಖೆಯ ಪೂರ್ವಾನುಮತಿ ಪಡೆಯತಕ್ಕದ್ದು.
ಇಲಾಖೆಯ ಕ್ರೀಡಾಂಗಣಗಳನ್ನು ಹಾಗೂ ಇಲಾಖಾ ಆಸ್ತಿಗಳನ್ನು ಇಲಾಖೆಯ ಪೂರ್ವಾನುಮತಿ ಇಲ್ಲದೇ ಇತರೆ ಇಲಾಖೆಗಳಿಗೆ ಹಾಗೂ ಖಾಸಗಿ ಸಂಸ್ಥೆಗಳಿಗೆ ತಾತ್ಕಾಲಿಕವಾಗಿಯಾಗಲೀ ಅಥವಾ ಶಾಶ್ವತವಾಗಿಯಾಗಲೀ ಪರಭಾರೆ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.
ಆದೇಶಗಳು ಜಾರಿಗೆ ಬಂದ ನಂತರ ಸದರಿ ನಿಯಮಗಳ ಉಲ್ಲಂಘನೆಯಾಗಿದ್ದಲ್ಲಿ ಸಂಬಂಧಪಟ್ಟ ಜಿಲ್ಲೆಯ ಉಪ/ಸಹಾಯಕ ನಿರ್ದೇಶಕರು ನಿಯಮಗಳನ್ನು ಉಲ್ಲಂಘಿಸಿರುವ ಅಧಿಕಾರಿಗಳ ವಿವರಗಳನ್ನು ದಿನಾಂಕ: 15-03-2025 ರೊಳಗೆ ಒದಗಿಸತಕ್ಕದ್ದು ಎಂದು ಸುತ್ತೋಲೆಯಲ್ಲಿ ನಿರ್ದೇಶನ ನೀಡಲಾಗಿದೆ.

Comments are closed.