Metro: ಮಂಗಳೂರು- ಉಡುಪಿ ನಡುವೆ ಮೆಟ್ರೋ ಸಂಚಾರ?

Metro: ಕಡಲ ನಗರಿಗಳಾದ ಉಡುಪಿ ಮತ್ತು ಮಂಗಳೂರಿನಲ್ಲಿ ವಾಹನ ಸಂಚಾರ ದಟ್ಟಣೆಯಾಗುತ್ತಿದೆ. ದಿನ ಕಳೆದಂತೆ ಬೆಳೆಯುತ್ತಿರುವ ಈ ಎರಡು ನಗರಗಳಲ್ಲಿ ಬೆಂಗಳೂರಿಗೆ ಪೈಪೋಟಿ ನೀಡುವಂತೆ ಟ್ರಾಫಿಕ್ ಕೂಡ ಬೆಳೆಯುತ್ತಿದೆ. ಇದೀಗ ಈ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಮಂಗಳೂರು ಮತ್ತು ಉಡುಪಿ ನಡುವೆ ಮೆಟ್ರೋ ಸಂಚಾರ ನಡೆಸಲು ಸರ್ಕಾರ ಪ್ಲಾನ್ ಮಾಡಿದೆ.
ಹೌದು, ಹಲವು ವರ್ಷಗಳ ಕರಾವಳಿ ಜನರ ಬೇಡಿಕೆಯಾಗಿರುವ ಮಂಗಳೂರು- ಉಡುಪಿ ನಗರಗಳಲ್ಲಿ ಮೆಟ್ರೋ ರೈಲು ಯೋಜನೆ ಕೈಗೊಳ್ಳಲು ಮಾಸ್ಟರ್ ಪ್ಲಾನ್ ರಚಿಸಲು ರಾಜ್ಯ ಸರಕಾರ ಮುಂದಾಗಿದೆ. ಮಂಗಳೂರು-ಉಡುಪಿ ನಗರಗಳ ಮಧ್ಯ ಮೆಟ್ರೋ ರೈಲು ಸಂಪರ್ಕ ಕಾರಿಡಾರ್ ಹಂತ-1ರ 60 ಕಿ.ಮೀ. ಉದ್ದದ ಮಾಸ್ಟರ್ ಪ್ಲಾನ್ ಸಂಕ್ಷಿಪ್ತ ಟಿಪ್ಪಣಿ ಹಾಗೂ ಕಾರ್ಯಸಾಧ್ಯತಾ ವರದಿಯನ್ನು ರೂಪಿಸುವಂತೆ ಸರ್ಕಾರ ಬೆಂಗಳೂರು ಮೆಟ್ರೋ ರೈಲು ನಿಗಮ(BMRCL)ಕ್ಕೆ ಸೂಚಿಸಿದೆ.
ಮಂಗಳೂರು ಉಡುಪಿ- ಮಣಿಪಾಲ ಇಂಟರ್ ಸಿಟಿ 64 ಕಿ.ಮೀ ಉದ್ದದ ಮೆಟ್ರೋ ರೈಲು ಸಂಪರ್ಕ ಕಲ್ಪಿಸಲು ತಾಂತ್ರಿಕ-ಆರ್ಥಿಕ ಕಾರ್ಯಸಾಧ್ಯತಾ ಅಧ್ಯಯನ ನಡೆಸಲು ಸರ್ಕಾರ ಉಭಯ ಜಿಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಸರಕಾರವು ಉಡುಪಿ-ಮಂಗಳೂರು ಭಾಗದಲ್ಲಿ ಮೆಟ್ರೋ ಆರಂಭಿಸುವ ಬಗ್ಗೆ ಪತ್ರ ಬರೆದಿದೆ. ಬಿಎಂಸಿಆರ್‌ಎಲ್ ಅಧ್ಯಯನ ನಡೆಸಲಿದ್ದು, ವರದಿ ಆಧಾರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಕೆಪಿಸಿಸಿಯ ಮಾಜಿ ಕಾರ್ಯದರ್ಶಿ ಮೋಹನ್ ದಾಸ್ ಹೆಗ್ಡೆ ಅವರು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಕೈಗಾರಿಕ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಪತ್ರ ಬರೆದಿದ್ದು “ಮಂಗಳೂರು ಮತ್ತು ಮಣಿಪಾಲದ ನಡುವೆ ಮೆಟ್ರೋ ರೈಲು ಮಾರ್ಗವನ್ನು ನಿರ್ಮಿಸುವುದು ಅತ್ಯಗತ್ಯ. ಈ ಪ್ರದೇಶದಲ್ಲಿ ಪ್ರಮುಖ ನಗರಗಳು, ಅರೆನಗರಗಳು ಮತ್ತು ಕೈಗಾರಿಕಾ ಪ್ರದೇಶಗಳಿವೆ. ಮೆಟ್ರೋ ರೈಲು ಮಾರ್ಗವು ಆರ್ಥಿಕ ಪ್ರಗತಿಯನ್ನು ಉತ್ತೇಜಿಸುತ್ತದೆ, ನಗರ ಅಭಿವೃದ್ಧಿಯನ್ನು ಸುಗಮಗೊಳಿಸುತ್ತದೆ ಮತ್ತು ಸಾರಿಗೆ ವ್ಯವಸ್ಥೆಯನ್ನು ಸುಲಭಗೊಳಿಸುತ್ತದೆ” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
Comments are closed.