ಸುಳ್ಯದಲ್ಲಿ ಮಾಸ್ ಶಾಖೆಯ ಅಡಿಕೆ ಸಂಸ್ಕರಣಾ ಘಟಕದ ಉದ್ಘಾಟನೆ

Share the Article

Sullia: ಸುಳ್ಯದ ಮಾಸ್ ಶಾಖೆಯಲ್ಲಿ ಕೆ.ಸೀತಾರಾಮ ರೈ ಅವರು ಸಂಸ್ಕರಣೆ ಘಟಕ ಆರಂಭಿಸುವ ಮೂಲಕ ಇಲ್ಲಿನ ಒಂದಿಷ್ಟು ಜನರಿಗೆ ಉದ್ಯೋಗ ಕಲ್ಪಿಸುವ ಜೊತೆಗೆ ಅಡಿಕೆ ಬೆಳೆಗಾರ ರೈತರಿಗೆ ದೈರ್ಯ ತುಂಬುವ ಕಾರ್ಯ ಆಗಿದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.

ಮಂಗಳೂರು ಕೃಷಿಕರ ಸಹಕಾರಿ ಸಂಘ ನಿಯಮಿತ ಮಾಸ್ ಲಿಮಿಟೆಡ್‌ನ ಸುಳ್ಯ ಶಾಖೆಯಲ್ಲಿ ಅಡಿಕೆ ಸಂಸ್ಕರಣೆ ಘಟಕವನ್ನು ಅವರು ಉದ್ಘಾಟಿಸಿ ಎಪಿಎಂಸಿ ಸಮುದಾಯ ಭವನದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದರು.

ಇಲ್ಲಿಂದು ಅಡಿಕೆ ಸಂಸ್ಕರಣೆ ಘಟಕ ಆರಂಭಿಸಿದರಿಂದ ಈ ಭಾಗದ ರೈತರಿಗೆ ಪ್ರಯೋಜವಾಗಲಿದೆ. ಹಳದಿ ರೋಗ, ಎಲೆಚುಕ್ಕಿ ರೋಗ ಬಾಧೆಯಿಂದ ಅಡಿಕೆ ಕೃಷಿ ವಿನಾಶದ ಅಂಚಿನಲ್ಲಿರುವ ಇಂದಿನ ದಿನಗಳಲ್ಲಿ ಕೃಷಿಕರಿಗೆ ಆಶಾ ಕಿರಣವಾಗಿ ಮಾಸ್ ಸಂಸ್ಥೆ ಬೆಳೆಯುತ್ತಿದೆ. ಸುಳ್ಯದಲ್ಲಿ ಕೃಷಿಯ ಜೊತೆಗೆ ಕೈಗಾರಿಕೆಗಳು ಅಭಿವೃದ್ಧಿ ಆಗಬೇಕು. ಈ ನಿಟ್ಟಿನಲ್ಲಿ ಸುಳ್ಯದಲ್ಲಿ ಕೈಗಾರಿಕಾ ವಲಯ ಸ್ಥಾಪನೆ ಮಾಡಬೇಕು ಎಂದು ಸರಕಾರಕ್ಕೆ ಬೇಡಿಕೆ ಸಲ್ಲಿಸಲಾಗುವುದು ಎಂದ ಅವರು ಇಂತಹ ಘಟಕಗಳು ಸುಳ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾಗಲಿ ಎಂದರು.

ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹಾಗೂ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೋಟ್ಟು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೀತಾರಾಮ ರೈ ಅವರು ಮಾಸ್ ಸಂಸ್ಥೆಯ ಮೂಲಕ ರೈತಾಪಿ ವರ್ಗಕ್ಕೆ ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಮಾಸ್ ಸಂಸ್ಥೆಯನ್ನೂ ಬೆಳೆಸುವ ಜೊತೆಗೆ ವಿವಿಧ ಕಡೆ ಶಾಖೆಗಳನ್ನು ತೆರೆದು, ಅಡಿಕೆ ಸಂಸ್ಕರಣಾ ಘಟಕ ಸ್ಥಾಪನೆ ಮಾಡಿ ರೈತರು ಬೆಳೆದ ಅಡಿಕೆಗೆ ಉತ್ತಮ ದರ ದೊರಕಿಸುವ ಕಾರ್ಯ ನಡೆಸುತ್ತಿರುವುದು ಶ್ಲಾಘನೀಯ ಎಂದರು.

 

ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಎಸ್.ಎನ್.ಮನ್ಮಥ, ಸುಳ್ಯ ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಜಯಪ್ರಕಾಶ್ ರೈ, ಎಪಿಎಂಸಿ ಕಾರ್ಯದರ್ಶಿ ಎಸ್. ರವೀಂದ್ರ, ಮಾಸ್ ನಿರ್ದೇಶಕರಾದ ಶ್ರೀರಾಮ ಪಾಟಾಜೆ, ಪುಷ್ಪರಾಜ ಅಡ್ಯಂತಾಯ, ಸುಧಾ ಎಸ್.ರೈ ಮತ್ತಿತರರು ಉಪಸ್ಥಿತರಿದ್ದರು.

 

ಮಾಸ್ ಲಿಮಿಟೆಡ್‌ನ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ಮಹಾಬಲೇಶ್ವರ ಭಟ್ ವಂದಿಸಿದರು. ಸವಣೂರು ಸಿಎ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಕಾರ್ಯಕ್ರಮ ನಿರೂಪಿಸಿದರು.

ಮಾಸ್ ಸಂಸ್ಥೆಯ ವಹಿವಾಟು ಶೇಕಡ 40ರಷ್ಟು ವೃದ್ಧಿ-ಸವಣೂರು ಸೀತಾರಾಮ ರೈ

ಮಾಸ್‌ ಸಂಸ್ಥೆಯ ಅಧ್ಯಕ್ಷ ಸಹಕಾರ ರತ್ನ ಸವಣೂರು ಕೆ.ಸೀತಾರಾಮ ರೈರವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸಹಕಾರ ರತ್ನ ದಿ. ವಾರಣಾಶಿ ಸುಬ್ರಾಯ ಭಟ್‌ರವರ ಪ್ರಯತ್ನ ಹಾಗೂ ಸಹಕಾರ ರತ್ನ ಎಂ.ಎನ್‌. ರಾಜೇಂದ್ರಕುಮಾ‌ರ್ ಇವರ ಪ್ರೋತ್ಸಾಹದೊಂದಿಗೆ ಪ್ರಾರಂಭಗೊಂಡ ಮಾಸ್ ಸಂಸ್ಥೆ ಕಳೆದ 23 ವರ್ಷಗಳಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಡಿಕೆ ಕೃಷಿಕರ ಹಿತ ಸಂರಕ್ಷಿಸುವ ಸಲುವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಸಂಸ್ಥೆಯು ಉತ್ತರೋತ್ತರ ಪ್ರಗತಿ, ಯಶಸ್ಸು ಸಾಧಿಸುವುದರೊಂದಿಗೆ ಸದಸ್ಯ ಬಾಂಧವರ ಹಿತರಕ್ಷಣೆಗೆ ಪಣತೊಟ್ಟಿದೆ. ಹತ್ತು ತಿಂಗಳ ಹಿಂದೆ ನಾನು ಸಂಸ್ಥೆಯ ಅಧ್ಯಕ್ಷನಾಗಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು ವಹಿವಾಟನ್ನು ವೃದ್ಧಿಗೊಳಿಸುವ ಗುರಿ ಹೊಂದುವುದರೊಂದಿಗೆ . ಈಗಾಗಲೇ ಜುಲೈ 2024ರಲ್ಲಿ ಕಾವು ಶಾಖೆಯನ್ನು ಹಾಗೂ ನವೆಂಬ‌ರ್ 2024ರಲ್ಲಿ ನಿಂತಿಕಲ್ಲು ಶಾಖೆಯನ್ನು ತೆರೆಯಲಾಗಿದೆ. ಇದೀಗ ಸುಳ್ಯದಲ್ಲಿ ಅಡಿಕೆ ಸಂಸ್ಕರಣಾ ಘಟಕವನ್ನು ಪ್ರಾರಂಭಿಸಲಾಗಿದೆ. ಅಲ್ಲದೇ ಕಳೆದ ಹತ್ತು ತಿಂಗಳ ಅವಧಿಯಲ್ಲಿ ಸಂಸ್ಥೆಯ ವಹಿವಾಟು ಶೇಕಡ 40ರಷ್ಟು ವೃದ್ಧಿಯಾಗಿದೆ ಎಂದು ಹೇಳಿದ ಅವರು ಮುಂದಿನ ತಿಂಗಳು ಸುಳ್ಯ ತಾಲೂಕಿನ ಉಬರಡ್ಕದಲ್ಲಿ ಮಾಸ್‌ ಅಡಿಕೆ ಖರೀದಿಯ ಶಾಖೆಯನ್ನು ತೆರೆಯಲಾಗುವುದು ಎಂದು ಸೀತಾರಾಮ ರೈ ತಿಳಿಸಿದರು.

Comments are closed.