Mangaluru : ದೈವರಾಧನೆಗೆ ಅಡ್ಡಿ ಆರೋಪ – ಸಂಸದರ ನೇತೃತ್ವದಲ್ಲಿ ಸರ್ಕಾರಿ ಅಧಿಕಾರಿಗಳು, ನೆಲ್ಲಿದಡಿಗುತ್ತು ಪ್ರಮುಖರ ಸಭೆ

Share the Article

Mangaluru : ಬಜಪೆ ಗ್ರಾಮದ ನೆಲ್ಲಿದಡಿಗುತ್ತಿನ ದೈವ ಕಾಂತೇರಿ ಜುಮಾದಿ ಸ್ಥಾನಕ್ಕೆ ತೆರಳಿ ನಿತ್ಯ ಆರಾಧನೆಗೆ ಮುಂದಿನ ದಿನಗಳಿಂದ ಅವಕಾಶವನ್ನು ನಿರಾಕರಿಸುವ ಮೂಲಕ ಮಂಗಳೂರು ಎಸ್‌ಇಝೆಡ್‌ ಕಂಪನಿ ತುಳುನಾಡಿನ ಆಸ್ಮಿತೆ, ನಂಬಿಕೆ ಮೇಲೆ ಸವಾರಿ ಮಾಡಲು ಹೊರಟಂತ ಪ್ರಕರಣ ಕರಾವಳಿ ಭಾಗದಲ್ಲಿ ಬಾರಿ ಸದ್ದು ಮಾಡಿತ್ತು. ಜನಗಳ ನಂಬಿಕೆಗೆ ಸರ್ಕಾರಿ ಸ್ವಾಮ್ಯದ ಕಂಪನಿ ಅಡ್ಡಿ ಮಾಡುತ್ತದೆ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಈ ಬೆನ್ನಲ್ಲೇ ಇದೀಗ ಸಂಸದ ಬ್ರಿಜೇಶ್ ಚೌಟ ಅವರು ಅಧಿಕಾರಿಗಳು ಮತ್ತು ನೆಲ್ಲಿದಡಿಗುತ್ತು ಪ್ರಮುಖರ ಜೊತೆಗೆ ಸಭೆ ನಡೆಸಿದ್ದಾರೆ

ಯಸ್, ಬಜಪೆ ಗ್ರಾಮದ ನೆಲ್ಲಿದಡಿಗುತ್ತಿನ ಸುಮಾರು 800 ವರ್ಷಗಳ ಇತಿಹಾಸವಿರುವ ಕಾಂತೇರಿ ಜುಮಾದಿ ದೈವಸ್ಥಾನದಲ್ಲಿ (ಸದ್ಯ ಎಸ್‌ಇಝಡ್‌ ಒಳಗೆ ಇದೆ) ದೈವಾರಾಧನೆಗೆ ಸಂಬಂಧಿಸಿ ಎಸ್‌ಇಝಡ್‌ ವಿವಾದ ಸೃಷ್ಟಿಸಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಶುಕ್ರವಾರ ಸಂಸದ ಕ್ಯಾ| ಬ್ರಿಜೇಶ್‌ ಚೌಟರ ಅಧ್ಯಕ್ಷತೆಯಲ್ಲಿ ಎಸ್‌ಇಝಡ್‌ ಅಧಿಕಾರಿಗಳು ಮತ್ತು ನೆಲ್ಲಿದಡಿಗುತ್ತಿಗೆ ಸಂಬಂಧಪಟ್ಟವರ ಸಭೆ ನಡೆಯಿತು.

 

ಎರಡೂ ಕಡೆಯವರ ಅಹವಾಲು ಆಲಿಸಿದ ಸಂಸದರು, ಸೋಮವಾರ ಜಿಲ್ಲಾಧಿಕಾರಿ, ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್‌, ನೆಲ್ಲಿದಡಿಗುತ್ತಿನ ಪ್ರಮುಖರು ಮತ್ತು ವ್ಯವಸ್ಥಾಪನ ಸಮಿತಿಯವರನ್ನೊಳಗೊಂಡ ಸಭೆ ನಡೆಸಿ ನಿರ್ಧಾರ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಯಿತು. ಸ್ಥಳಕ್ಕೆ ಭೇಟಿ ನೀಡಿ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಲು ಸಾಧ್ಯವೇ ಎನ್ನುವ ಬಗ್ಗೆಯೂ ಪರಿಶೀಲಿಸುವ ಬಗ್ಗೆಯೂ ಸಭೆಯಲ್ಲಿ ತೀರ್ಮಾನಿಸಲಾಯಿತು.

ಏನಿದು ಪ್ರಕರಣ?

2006ರಲ್ಲಿ ಕೈಗಾರಿಕಾ ಪ್ರದೇಶಕ್ಕಾಗಿ ಸಾವಿರಾರು ಎಕರೆ ಜನವಸತಿ ಜಾಗ ಸರ್ಕಾರದಿಂದ ಭೂ ಸ್ವಾಧೀನವಾಗಿತ್ತು. ಬಜ್ಪೆ, ಬಾಳ, ಕುತ್ತೆತ್ತೂರು, ಪೆರ್ಮುದೆ ಕಳವಾರು ಗ್ರಾಮದ ಸಾವಿರಾರು ಎಕರೆ ಭೂ ಸ್ವಾಧೀನವಾಗಿತ್ತು. ಸಮೃದ್ಧ ಗದ್ದೆಗಳು, ಸಾವಿರಾರು ನಾಗಬನಗಳು, ಬ್ರಹ್ಮಸ್ಥಾನಗಳು, ದೈವದ ಗುಡಿಗಳು, ಕೆರೆ, ತೊರೆ, ಶಾಲೆ, ಚರ್ಚು, ಮಸೀದಿ ಸಾವಿರಾರು ಮನೆಗಳು ಭೂ ಸ್ವಾಧೀನಕ್ಕೆ ನೆಲಸಮವಾಗಿತ್ತು. ಆದರೆ 800 ವರ್ಷಗಳ ಇತಿಹಾಸವಿದ್ದ ನೆಲ್ಲಿದಡಿ ಗುತ್ತಿನ ದೇವಸ್ಥಾನ ಮುಟ್ಟಲಾಗಲಿಲ್ಲ. ನೆಲ್ಲಿದಡಿ ಗುತ್ತಿನ ಪೂರ್ತಿ ಜಾಗವನ್ನು ಕಂಪನಿ ಬಲಾತ್ಕಾರದಿಂದ ತನ್ನ ಹೆಸರಿಗೆ ಬರೆಸಿಕೊಂಡರೂ ದೈವಸ್ಥಾನ ಮಟ್ಟಲಾಗಲಿಲ್ಲ‌. ಯಾವ ಕಾರಣಕ್ಕೂ ನಾನು ಈ ಮಣ್ಣನ್ನು ಬಿಡುವುದಿಲ್ಲ ಎಂದು ದೈವ ನುಡಿದ ಕಾರಣ ಸಾವಿರಾರು ಎಕರೆ ಕೈಗಾರಿಕಾ ಪ್ರದೇಶದಲ್ಲಿ ಏಕಾಂಗಿಯಾಗಿ ಕಾಂತೇರಿ ಜುಮಾದಿ ದೈವದ ದೈವಸ್ಥಾನ ಈಗಲೂ ಇದೆ. 2016ರಲ್ಲಿ ಕಂಪನಿ ಮತ್ತೊಮ್ಮೆ ನೆಲ್ಲಿದಡಿ ಗುತ್ತನ್ನು ನೆಲಸಮ ಮಾಡಲು ಯತ್ನಿಸಿದರೂ ಆಗಲಿಲ್ಲ. ಕೊನೆಗೆ ಅಂದಿನ ಜಿಲ್ಲಾಧಿಕಾರಿ ದೈವಸ್ಥಾನವನ್ನು ಒಂದು ಸ್ಮಾರಕದ ಹಾಗೆ ಉಳಿಸಿಕೊಳ್ಳುವ ಭರವಸೆ ನೀಡಿದ್ದರು.

 

ಮಂಗಳೂರು ಎಸ್‌ಇಝೆಡ್‌ ಕಂಪನಿಯು ಭೂ ಸ್ವಾಧೀನದ ವೇಳೆ ನೆಲ್ಲಿದಡಿ ಗುತ್ತಿನ 22 ಮನೆಗಳ ಸ್ಥಳಾಂತರ ಮಾಡಲು ಮನವೊಲಿಸುವ ಸಭೆಯಲ್ಲಿ ದೈವಕ್ಕೆ ನಿತ್ಯ ಹೂ ನೀರು, ಸಂಕ್ರಮಣ, ದೀಪಾವಳಿ, ಚೌತಿ, ಅಷ್ಟಮಿ, ಮಾರಿ ಉತ್ಸವ, ಬಂಡಿ ಉತ್ಸವ, ಚಾವಡಿ ನೇಮ, ಕುಟುಂಬದಲ್ಲೆ ಮೃತಪಟ್ಟರೆ ಅದರ ಕಾರ್ಯಕ್ರಮ ಹೀಗೆ ಹತ್ತು ಹಲವು ಕೆಲಸಗಳನ್ನು ಮಾಡಲು ಅವಕಾಶ ನೀಡುವುದಾಗಿ ಭರವಸೆ ನೀಡಲಾಗಿತ್ತು. 2016ರ ಡಿಸೆಂಬರ್‌ನಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೂ ಇದೇ ತೀರ್ಮಾನಕ್ಕೆ ಬರಲಾಗಿತ್ತು.

ಅದರಂತೆ ನೆಲ್ಲಿದಡಿಗುತ್ತು ಹಾಗೂ ಊರಿನವರು ಎಂಎಸ್‌ಇಝೆಡ್‌ ಅಧಿಕಾರಿಗಳಿಗೆ ಮಾಹಿತಿ ನೀಡಿ, ದೈವಸ್ಥಾನಕ್ಕೆ ತೆರಳಿ ಸೇವಾ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದರು. ಆದರೆ ಫೆ.12ರಂದು ಸಂಕ್ರಮಣ ಸೇವೆ ಮಾಡಲು ತೆರಳಲು ಮನವಿ ಪತ್ರ ನೀಡುವ ವೇಳೆ ಇದು ಕೊನೆಯ ಅವಕಾಶವಾಗಿದ್ದು, ಮುಂದಿನ ದಿನಗಳಿಂದ ಆರಾಧನೆಗೆ ಅವಕಾಶ ಇರುವುದಿಲ್ಲ ಎಂದು ಎಂಎಸ್‌ಇಝೆಡ್‌ ಕಂಪನಿ ಅಧಿಕಾರಿಗಳು ಹೇಳಿದ್ದಾರೆ.ತುಳುನಾಡಿನ ಅತ್ಯಂತ ಪ್ರಸಿದ್ಧ ದೈವಸ್ಥಾನದಲ್ಲಿ ದೈವಕ್ಕೆ ಹೂವು ನೀರು ಇಡಲು ನಿರ್ಬಂಧ ಹೇರಲಾಗಿದೆ. ಸದ್ಯ ಕಂಪೆನಿ ಅಧಿಕಾರಿಗಳ ನಡೆಯ ವಿರುದ್ದ ಸಾಮಾಜಿಕ ತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ನೆಲ್ಲಿದಡಿ ಗುತ್ತು ಉಳಿಸಿ ಹೆಸರಿನಲ್ಲಿ ಭಾರೀ ಅಭಿಯಾನ ಆರಂಭವಾಗಿದೆ.

ಇನ್ನು ಈ ಕುರಿತಾಗಿ ನೆಲ್ಲಿದಡಿ ಗುತ್ತುವಿನ ಯಜಮಾನ ಲಕ್ಷ್ಮಣ ಚೌಟ ಪ್ರತಿಕ್ರಿಯಿಸಿದ್ದು ಸಂಕ್ರಮಣ ಸೇವೆ ಆಗದೇ ಇದ್ದರೆ ಏನಾಗುತ್ತೆ ಅಂತ ಹೇಳಲು ಸಾಧ್ಯವಿಲ್ಲ, ಅಷ್ಟು ತೊಂದರೆಯಿದೆ ಎಂದಿದ್ದಾರೆ. ಎಸ್‌ಇಝಡ್‌ನವರು, ಅಲ್ಲಿನ ಕಂಪೆನಿಯವರಿಗೆ ಎಲ್ಲಾ ವಿಷಯ ಗೊತ್ತಿದೆ, ಕಷ್ಟಗಳನ್ನ ಅನುಭವಿಸಿಯೂ ಹೀಗೆ ಮಾಡ್ತಾ ಇದಾರೆ. ಈ ಹಿಂದೆ ಭೂ ಸ್ವಾಧೀನ ಆದಾಗಲೂ ದೈವವೇ ನಮಗೆ ಚಾವಡಿ ಬಿಟ್ಟು ಹೋಗಬೇಡ ಅಂದಿತ್ತು. ಹಾಗಾಗಿ ನಾನು ಹೋಗಿಲ್ಲ, ಸತ್ತರೂ ಅಲ್ಲೇ ಸಾಯುತ್ತೇನೆ ಅಂತ ಆ ಜಾಗ ಬಿಡಲೇ ಇಲ್ಲ. ಇದ್ದಬದ್ದವರನ್ನು ಕಾಡಿಬೇಡಿ ನಾವು ಇಷ್ಟರ ತನಕ ಅಲ್ಲಿ ದೈವಾರಾಧನೆ ಮಾಡಿದ್ದೇವೆ. ಇನ್ನು ಮಾಡಲು ಅಸಾಧ್ಯ ಅಂತ ಅವರು ಹೇಳುವಾಗ ನಾವು ಏನು ಮಾಡೋದು ಎಂದು ಪ್ರಶ್ನೆಸಿದ್ದಾರೆ.

ಅಲ್ಲದೆ ಕಂಪೆನಿ ಒಳಗಡೆ ಮೂರು ಮೂರು ಸಲ ಬೆಂಕಿ ಬಿದ್ದಿದೆ. ಆದರೂ ಅವರಿಗೆ ಅರ್ಥ ಆಗಲ್ಲ. ಕಳೆದ ಸಂಕ್ರಮಣದ ದಿನ ನಮಗೆ ತಡೆ ಒಡ್ಡಿದ್ದಾರೆ, ಅಲ್ಲಿಗೆ ಹೋಗಲು ಬಿಡಲ್ಲ ಅಂತ ಗೇಟ್‌ನಲ್ಲಿ ನಿಲ್ಲಿಸಿದ್ದಾರೆ. ಮಾರ್ಚ್‌, ಎಪ್ರಿಲ್‌ನಲ್ಲಿ ಅಲ್ಲಿ ಚಾವಡಿ ನೇಮ, ಬಂಡಿ ಉತ್ಸವಗಳು ನಡೆಯುತ್ತೆ, ಅದಕ್ಕೆ ಏನ್‌ ಮಾಡೋದು? ನಮಗೆ ಯಾವ ಅಧಿಕಾರಿಯನ್ನ ಸಂಪರ್ಕಿಸಿದ್ರೂ ಸಮಸ್ಯೆಗೆ ಪರಿಹಾರವೇ ಸಿಕ್ಕಿಲ್ಲ. ಡಿಸಿ, ಎಸಿ, ಎಂಪಿ, ಎಂಎಲ್‌ಎ ಯಾರನ್ನ ಭೇಟಿಯಾದ್ರೂ ಆಚರಣೆಗೆ ಅನುಮತಿ ಸಿಕ್ಕಿಲ್ಲ. ದೈವಸ್ಥಾನದ ಜಾಗ ಕೈಗಾರೀಕರಣದ ಮಧ್ಯೆಯೂ ಅಲ್ಲಿ ಉಳಿದಿದೆ, ಆದರೆ ಈಗ ಆಚರಣೆಗೆ ಸಮಸ್ಯೆ ಬಂದಿದೆ. ಜನರ ಭಾವನೆಗಳ ಮೇಲೆ ಆಟವಾಡಿ ಕೈಗಾರೀಕರಣ, ಅಭಿವೃದ್ದಿ ನಮಗೆ ಬೇಡವೇ ಬೇಡ. ಎಸ್‌ಇಝಡ್‌ ಅಧಿಕಾರಿಗಳು, ಸ್ಥಳೀಯ ಜಿಲ್ಲಾಡಳಿತ ನೆಲ್ಲಿದಡಿಗುತ್ತು ದೈವಾರಾಧನೆ ನಿಲ್ಲಿಸಬಾರದು.‌ ಈಗ ಅಧಿಕಾರಿಗಳು ತಡೆ ಒಡ್ಡಿದ ಕಾರಣದಿಂದ ಗ್ರಾಮದ ಜನರಿಗೆ ದೈವದ ಪ್ರಸಾದ ಸಿಗದಂತೆ ಆಗಿದೆ ಎಂದಿದ್ದಾರೆ.

Comments are closed.