Belthangady : ಬರೀ 10 ಮಕ್ಕಳಿಂದ ಅದ್ದೂರಿ ಸ್ಕೂಲ್ ಡೇ ಆಚರಣೆ !!

Belthangady : ಸರ್ಕಾರಿ ಶಾಲೆಗಳೆಂದರೆ ಜನರು ಮೂಗುಮುರಿಯುತ್ತಿರುವ ಈ ಕಾಲದಲ್ಲಿ ಕೆಲವು ಸರ್ಕಾರಿ ಶಾಲೆಗಳು ತಮ್ಮ ವಿಶೇಷತೆಯಿಂದ, ಗುಣಮಟ್ಟದ ಶಿಕ್ಷಣದಿಂದ ರಾಜ್ಯದಲ್ಲಿ ಗುರುತಿಸಿಕೊಳ್ಳುತ್ತಿವೆ. ಅಂತೆಯೇ ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಒಂದು ತನ್ನ ವಿಶಿಷ್ಟ ಕಾರ್ಯಕ್ರಮದ ಮುಖಾಂತರ ಸದ್ದು ಮಾಡುತ್ತಿದೆ.

ಕೊರೋನಾ ಸಂದರ್ಭದಲ್ಲಿ ಆನ್‌ಲೈನ್ ತರಗತಿ ಮೂಲಕ ರಾಜ್ಯದ ಗಮನ ಸೆಳೆದಿತ್ತು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಫಂಡಿಜೆ ವಾಳ್ಯದ ಸರಕಾರಿ ಪ್ರಾಥಮಿಕ ಶಾಲೆ. ಇದೀಗ ಮತ್ತೆ ಇದೇ ಶಾಲೆ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಕಾರಣ ಆ ಶಾಲೆಯಲ್ಲಿ ನಡೆದ ಸ್ಕೂಲ್ ಡೇ ಫಂಕ್ಷನ್.
ಹೌದು, ಈ ಶಾಲೆಯಲ್ಲಿ ನಡೆದ ಸ್ಕೂಲ್ ಡೇ ತುಂಬಾ ವಿಶಿಷ್ಟ ಮನ್ನಣೆ ಪಡೆದಿದೆ. ಕಾರಣವೇನೆಂದರೆ ಶಾಲೆಯಲ್ಲಿರುವ ಬರೀ 10 ಮಕ್ಕಳಿಂದಲೇ ಅದ್ದೂರಿಯಾದ ಸ್ಕೂಲ್ ಡೇ ಸೆಲೆಬ್ರೇಶನ್ ಮಾಡಲಾಗಿದೆ. ಅಂದಹಾಗೆ 1ರಿಂದ 7ನೇ ತರಗತಿವರೆಗೆ ಇರುವ ಶಾಲೆಯಲ್ಲಿ ರುವುದು 10 ಮಕ್ಕಳು ಮಾತ್ರ. ಒಬ್ಬರು ಸರಕಾರಿ ಶಿಕ್ಷಕಿ, ಇನ್ನೊಬ್ಬರು ಅತಿಥಿ ಶಿಕ್ಷಕಿ. ಓರ್ವ ವಿದ್ಯಾರ್ಥಿ ಇದ್ದರೂ ಶಾಲೆ ಬಂದ್ ಮಾಡಬಾರದು ಎಂಬ ಮಾತು ಮತ್ತು ಊರಿನವರ ಆಸಕ್ತಿಯಿಂದ ಶಾಲೆ ನಡೆಯುತ್ತಿದೆ. ಮಕ್ಕಳ ಸಂಖ್ಯೆ ಕುಂದುತ್ತಿದ್ದಂತೆಯೇ ಸ್ಕೂಲ್ ಡೇ ನಡೆಸುವ ಆಸಕ್ತಿಯೂ ಕಡಿಮೆಯಾಗಿತ್ತು.
ಹೀಗಾಗಿ 40 ವರ್ಷಗಳಿಂದ ವಾರ್ಷಿಕೋತ್ಸವ ನಡೆದಿರಲಿಲ್ಲ. ಆದರೆ ಈ ಬಾರಿ ಮಾತ್ರ ವಾರ್ಷಿಕೋತ್ಸವ ನಡೆಸಲೇ ಬೇಕೆಂದು ಮುಖ್ಯ ಶಿಕ್ಷಕಿ ಫ್ಲೇವಿಯಾ ಡಿ’ಸೋಜಾ, ಶಾಲಾ ಉಸ್ತುವಾರಿ ಸಮಿತಿ ಮತ್ತು ಹಳೇ ವಿದ್ಯಾರ್ಥಿಗಳು ಜತೆಯಾಗಿ ನಿರ್ಧರಿಸಿದ್ದರು. ಒಂದು ವಾಟ್ಸ್‌ಆಯಪ್ ಗ್ರೂಪ್ ರಚಿಸಿ ವಾರ್ಷಿಕೋತ್ಸವದ ಚಟುವಟಿಕೆಗೆ ಚಾಲನೆ ನೀಡಿದರು. ಊರಿನವರು ಆರ್ಥಿಕ ಸಹಾಯದೊಂದಿಗೆ ಶಾಲೆ ಅಲಂಕಾರ, ವೇದಿಕೆ ರಚನೆ, ಊಟದ ವ್ಯವಸ್ಥೆಯ ಭರವಸೆ ನೀಡಿದ್ದಲ್ಲದೆ ನುಡಿದಂತೆ ನಡೆದರು. ಸುಮಾರು 40 ವರ್ಷಗಳ ಬಳಿಕ ಫೆ.22ರಂದು ಸಂಜೆ ಶಾಲಾ ಮಕ್ಕಳ ಪ್ರತಿಭಾ ದಿನ ಹಾಗೂ ಬಹುಮಾನ ವಿತರಣೆ ಸಮಾರಂಭ ನಡೆಯಿತು.
ಇನ್ನು ಮುಖ್ಯವಾದ ಸಂಗತಿ ಎಂದರೆ ಈ ಇಡೀ ಶಾಲೆಯಲ್ಲಿರುವ ಬರಿ 10 ಮಕ್ಕಳೇ ಇಡೀ ಕಾರ್ಯಕ್ರಮವನ್ನು ನಿರ್ವಹಿಸಿದ್ದಾರೆ. ಅವರ ನೃತ್ಯ ವಿನೋದ, ಹಾಡು, ಸಂಗೀತಗಳಿಗೆ ಯಾವ ಎಳ್ಳೆ ಇರಲಿಲ್ಲ. ಊರ ಕಲಾವಿದರು ಸೇರಿ ಸಂಗೀತ, ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ನೂರಾರು ಹಿರಿಯ ವಿದ್ಯಾರ್ಥಿಗಳು ಒಂದೆಡೆ ಸೇರಿ ನಾಲ್ಕು ದಶಕಗಳ ಕನಸನ್ನು ನನಸಾಗಿಸಿದರು.
Comments are closed.