Mangaluru: ಸೈಬರ್‌ ವಂಚಕರ ಜೊತೆಗೆ ಮಂಗಳೂರು ಪೊಲೀಸರ ಪ್ರವಾಸ, ಸೆಲ್ಫಿ ಆರೋಪ

Share the Article

Mangaluru: ಸೈಬರ್‌ ವಂಚಕರನ್ನು ಬಂಧನ ಮಾಡಿ ವಿಚಾರಣೆ ಮಾಡಬೇಕಾಗಿರುವ ಪೊಲೀಸರು ಆರೋಪಿಗಳ ಜೊತೆಗೆ ಪ್ರವಾಸ ಹೋಗಿರುವ ಸುದ್ದಿ ವರದಿಯಾಗಿದೆ. ಸೆಲ್ಫಿ ತಗೊಂಡು, ಕಾನೂನು ಕಾಲೇಜಿನ ವಿದ್ಯಾರ್ಥಿಗಳಿಗೆ ಸೈಬರ್‌ ವಂಚನೆಯ ಪಾಠ ಕೂಡಾ ಮಾಡಿದ್ದಾರೆ ಎಂದು ಟಿವಿ9 ವರದಿ ಮಾಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಉರ್ವ ಠಾಣೆಯ ಪೊಲೀಸರ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಜೊತೆಗೆ ಆರೋಪಿಗಳ ಜೊತೆ ಸೆಲ್ಫಿ ಫೋಟೋ ವೈರಲ್‌ ಆಗಿದೆ. ಜಾಗತಿಕ ಆನ್‌ಲೈನ್‌ ಮಾರ್ಕೆಟ್‌ನ ದೈತ್ಯ ಅಮೆಜಾನ್‌ ಕಂಪನಿಗೆ ವಂಚನೆ ಮಾಡಿರುವ ರಾಜಸ್ಥಾನ ಮೂಲದ ರಾಜ್‌ಕುಮಾರ್‌ ಮೀನಾ (23), ಸುಭಾಸ್‌ ಗುರ್ಜರ್‌(27) ವಂಚನೆ ಮಾಡಿದ ಆರೋಪಿಗಳು. 30 ಕೋಟಿ ರೂ. ಲೂಟಿ ಮಾಡಿದ ಇವರನ್ನು ತಮಿಳುನಾಡಿನ ಸೇಲಂ ಪೊಲೀಸರು ಬಂಧನ ಮಾಡಿದ್ದರು.

ಉರ್ವ ಠಾಣೆಯಲ್ಲೂ ಆರೋಪಿಗಳ ಕುರಿತು ಪ್ರಕರಣ ದಾಖಲು ಮಾಡಲಾಗಿತ್ತು. ಬಂಧಿತ ಆರೋಪಿಗಳನ್ನು ಸೇಲಂ ಜೈಲ್‌ನಿಂದ ಬಾಡಿವಾರೆಂಟ್‌ ಮೇಲೆ ಉರ್ವ ಪೊಲೀಸರು ನಗರಕ್ಕೆ ಕರೆದುಕೊಂಡು ಬಂದಿದ್ದರು. ಆರೋಪಿಗಳ ಖರ್ಚಿನಲ್ಲೇ ಗುಜರಾತ್‌ಗೆ ಹೋಗಿದ್ದರು ಎನ್ನುವ ಆರೋಪ ಕೇಳಿ ಬಂದಿದೆ.

ಉರ್ವ ಠಾಣೆಯ ನಾಲ್ವರು ಪೊಲೀಸರು ತನಿಖೆ ನೆಪದಲ್ಲಿ ವಿಮಾನದಲ್ಲಿ ಗುಜರಾತ್‌ಗೆ ಹೋಗಿ, ಓರ್ವ ಆರೋಪಿ ಜೊತೆ ಸಲುಗೆ ಬೆಳೆಸಿ ನಾನಾ ಕಡೆ ಸುತ್ತಾಡಿದ್ದಾರೆ. ಜೊತೆಗೆ ಆರೋಪಿ ಜೊತೆ ಸೆಲ್ಫಿ ಕ್ಲಿಕ್‌ ಕೂಡಾ ಮಾಡಲಾಗಿದೆ ಎನ್ನುವ ಆರೋಪವನ್ನು ಟಿವಿ9 ವರದಿ ಮಾಡಿದೆ.

ಮಂಗಳೂರಿನ ಉರ್ವ ಪೊಲೀಸ್‌ ಠಾಣೆಯಲ್ಲಿ ಕಾನೂನು ಕಾಲೇಜಿನ ವಿದ್ಯಾರ್ಥಿಗಳಿಗೆ ಜಾಗೃತಿ ಪಾಠ ಮಾಡಲು ಆರೋಪಿ ಕೂಡಾ ಸೈಬರ್‌ ವಂಚನೆ ಬಗ್ಗೆ ಮಾಹಿತಿ ನೀಡಿದ್ದ ಎನ್ನಲಾಗಿದೆ. ಸದ್ಯಕ್ಕೆ ಪೊಲೀಸರ ಮೇಲಿರುವ ಆರೋಪ, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಗುಸುಗುಸು ಚರ್ಚೆ ಶುರುವಾಗಿದೆ.

Comments are closed.