ಮಾನವ-ವನ್ಯಜೀವಿ ಸಂಘರ್ಷದ ಸ್ಥಳಗಳಿಗೆ ₹ 21 ಕೋಟಿ ವಿಶೇಷ ಅನುದಾನ

Madikeri: ಇತ್ತೀಚೆಗೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹಾಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ರವರು ಕೊಡಗಿನಲ್ಲಿ ಸಂಭವಿಸುತ್ತಿರುವ ಮಾನವ-ವನ್ಯಜೀವಿ ಸಂಘರ್ಷದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಾನ್ಯ ಮುಖ್ಯಮಂತ್ರಿಗಳಿಂದ ಮಂಜೂರು ಮಾಡಿಸಿಕೊಂಡಿರುವ ₹ 21 ಕೋಟಿಯ ವಿಶೇಷ ಅನುದಾನವನ್ನು ತ್ವರಿತ ಗತಿಯಲ್ಲಿ ಅನುಷ್ಠಾನಗೊಳಿಸಲಿರುವ ಭಾಗಗಳಿಗೆ ಭೇಟಿ ನೀಡಿ, ಸ್ಥಳ ಪರಿಶೀಲನೆ ಕೈಗೊಳ್ಳಲಿದ್ದಾರೆ ಎಂದು ಸಂಕೇತ್ ಪೂವಯ್ಯ ತಿಳಿಸಿದ್ದಾರೆ.

ಹಿರಿಯ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಬಿ.ಶೆಟ್ಟಿಗೇರಿ, ಕುಂದ, ಈಚೂರು, ತಿತಿಮಟಿ, ಮರಪಾಲ, ದೇವಮಚ್ಚಿ, ಚೆನ್ನಂಗಿ, ಮಾಲ್ದಾರೆ, ಗಟ್ಟದಾಳ ಹಾಗೂ ಚೇಲಾವರ ಭಾಗದಲ್ಲಿ ಸ್ಥಳ ಪರಿಶೀಲನೆ ನಡೆಸಿ ಕೂಡಲೇ ಕಾಮಗಾರಿ ಕೈಗೆಟ್ಟಿಕೊಳ್ಳಲು ಆದೇಶ ನೀಡಲಿದ್ದಾರೆ.

ಈಗಾಗಲೇ ಈ ಭಾಗದ ಸಮಸ್ಯೆಗಳ ಬಗ್ಗೆ ತಮಗೆ ಇರುವ ಮಾಹಿತಿಯೊಂದಿಗೆ, ಅರಣ್ಯಾಧಿಕಾರಿಗಳು, ಸ್ಥಳೀಯರು ಹಾಗೂ ಪ್ರಮುಖರೊಂದಿಗೆ ಚರ್ಚಿಸಿ, ರೈಲ್ವೆ ಬ್ಯಾರಿಕೇಡ್, ಆನೆ ಕಂದಕ ನಿರ್ಮಾಣ ಮತ್ತಿತರ ಪರಿಹಾರ ಕಾಮಗಾರಿಯ ಅನುಷ್ಠಾನಕ್ಕೆ ಹಸಿರು ನಿಶಾನೆ ನೀಡಲಿದ್ದಾರೆ.
ನಾಳೆ ದಿನಾಂಕ 25-02-2025 ರಂದು ಮುಂಜಾನೆ 7:00 ಗಂಟೆಯಿಂದ ಮಧ್ಯಾಹ್ನ 1:00ಗಂಟೆಯ ತನಕ ಈ ಭಾಗದ ಪ್ರವಾಸದಲ್ಲಿರುವ ಮಾನ್ಯ ಶಾಸಕರು, ಈ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಕೈಕೊಳ್ಳಬೇಕಾದ ಹಲವು ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಹಾಗೂ ಪ್ರಮುಖರೊಂದಿಗೆ ಚರ್ಚಿಸಲಿದ್ದಾರೆ ಎಂದು ಮೇರಿಯಂಡ ಸಂಕೇತ್ ಪೂವಯ್ಯ ತಿಳಿಸಿದ್ದಾರೆ.

Comments are closed.