PM Modi: ಕಾರ್ಯಕ್ರಮಕ್ಕೆ ತಡವಾಗಿ ಬಂದು ಎಲ್ಲರ ಕ್ಷಮೆಯಾಚಿಸಿದ ಪ್ರಧಾನಿ ಮೋದಿ – ಲೇಟ್ ಆಗಿದ್ದಕ್ಕೆ ಕೊಟ್ಟ ಕಾರಣ ಕೇಳಿ ಎಲ್ಲರಿಗೂ ಶಾಕ್ !

ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಕಾರ್ಯಗಳ ಮುಖಾಂತರ ಎಲ್ಲರಿಗೂ ಮಾದರಿಯಾಗುವಂತವರು. ಅದರಲ್ಲೂ ಸಮಯ ಪಾಲನೆಯಲ್ಲಿ ಅವರು ಎತ್ತಿದ ಕೈ. ಇದೇ ಸಮಯಕ್ಕೆ ಕಾರ್ಯಕ್ರಮ ಶುರುವಾಗಬೇಕು, ಸಭೆಗಳು ಆರಂಭವಾಗಬೇಕು ಎಂದು ನಿರ್ಧರಿಸಿದರೆ ಅದೇ ವೇಳೆಗೆ ಎಲ್ಲವೂ ಆರಂಭವಾಗಬೇಕು ಎಂಬುದು ಅವರ ನಿಯಮ. ಮತ್ತು ಅದಕ್ಕೆ ಅವರು ಸರಿಯಾದ ಸಮಯಕ್ಕೆ ಹಾಜರಿರುತ್ತಾರೆ. ಆದರೆ ಅಚ್ಚರಿಯೇನೆಂದರೆ ಕಾರ್ಯಕ್ರಮ ಒಂದಕ್ಕೆ ಮೋದಿಯವರು ತಡವಾಗಿ ಆಗಮಿಸಿದ್ದು ಬಳಿಕ ಎಲ್ಲರ ಬಳಿ ಕ್ಷಮೆಯಾಚಿಸಿದ್ದಾರೆ. ಅಲ್ಲದೆ ತಾನೇಕೆ ತಡವಾಗಿ ಬಂದೆ ಎಂಬ ಕಾರಣವನ್ನು ನೀಡಿದ್ದಾರೆ. ಆದರೆ ಈ ಕಾರಣ ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಹೌದು, ಭೋಪಾಲ್‌ನಲ್ಲಿ (Bhopal) ನಡೆಯುತ್ತಿರುವ ‘ಇನ್ವೆಸ್ಟ್ ಮಧ್ಯಪ್ರದೇಶ – ಜಾಗತಿಕ ಹೂಡಿಕೆದಾರರ ಶೃಂಗಸಭೆ-2025’ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಸೋಮವಾರ ತಡವಾಗಿ ಆಗಮಿಸಿದರು. ಅಲ್ಲದೆ ತಾನು ತಡವಾಗಿ ಆಗಮಿಸಿದ್ದಕ್ಕೆ ಎಲ್ಲರ ಬಳಿ ಕ್ಷಮೆಯಾಚಿಸಿದ ಪ್ರಧಾನಿ ಮೋದಿ ಅವರು ತಡವಾಗಲು ನಿಜವಾದ ಕಾರಣವನ್ನೂ ವಿವರಿಸಿದರು.

ತಡವಾಗಲು ಮೋದಿ ಕೊಟ್ಟ ಕಾರಣ ಏನು?
ಭಾನುವಾರ ಸಂಜೆ ನಾನು ಭೋಪಾಲ್​ಗೆ ಆಗಮಿಸಿದಾಗ, ಸೋಮವಾರ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುತ್ತಿರುವುದು ತಿಳಿಯಿತು. ತಮ್ಮ ಪ್ರಯಾಣದ ವೇಳೆ ಭದ್ರತಾ ಕಾರಣಗಳಿಂದಾಗಿ ರಸ್ತೆಗಳು ಬಂದ್ ಆಗುವ ಸಾಧ್ಯತೆ ಇತ್ತು. ಇದು ಮಕ್ಕಳು ಪರೀಕ್ಷೆಗೆ ತೆರಳಲು ಅಡ್ಡಿಯಾಗಬಹುದೆಂದು ಹೇಳಿದರು. ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಮತ್ತು ಅವರು ತಮ್ಮ ಪರೀಕ್ಷಾ ಕೇಂದ್ರಗಳನ್ನು ಸಮಯಕ್ಕೆ ಸರಿಯಾಗಿ ತಲುಪಬೇಕೆಂದು ಖಚಿತಪಡಿಸಿಕೊಳ್ಳುವುದು ಮುಖ್ಯವೆಂದು ಭಾವಿಸಿದ್ದರಿಂದ ತಮ್ಮ ಪ್ರಯಾಣವನ್ನು 10-15 ನಿಮಿಷಗಳ ಕಾಲ ಉದ್ದೇಶಪೂರ್ವಕವಾಗಿ ವಿಳಂಬಗೊಳಿಸಿದ್ದಾಗಿ ಪ್ರಧಾನಿ ಮೋದಿ ಸ್ಪಷ್ಟಪಡಿಸಿದರು.

ಇನ್ನು ರಾಜಭವನದಿಂದ ಬೆಳಿಗ್ಗೆ 9.45 ಕ್ಕೆ ಹೊರಟು ಕಾರ್ಯಕ್ರಮಕ್ಕೆ ತೆರಳಬೇಕಿದ್ದ ಅವರು, ಬೆಳಿಗ್ಗೆ 10 ಗಂಟೆಗೆ ಹೊರಡಲಿದ್ದಾರೆ ಎಂದು ಅಧಿಕಾರಿ ಹೇಳಿದ್ದರು. ಈ ಬದಲಾವಣೆಯಿಂದಾಗಿ ವಿದ್ಯಾರ್ಥಿಗಳು ಯಾವುದೇ ಅಡೆತಡೆಯಿಲ್ಲದೆ ತಮ್ಮ ಪರೀಕ್ಷಾ ಕೇಂದ್ರಗಳನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಹೀಗಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂಬ ಮುನ್ನೆಚ್ಚರಿಕೆಯಿಂದ ಪ್ರಧಾನಿಯವರು ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದರು.

Comments are closed.