of your HTML document.

Mudigere: ಸರ್ಕಾರಿ ಶಾಲೆಗೆ ಮಗನನ್ನು ಸೇರಿಸಿ, ಶಾಲಾ ಅಭಿವೃದ್ಧಿಗೆ ₹2.18 ಕೋಟಿ ನೀಡಿದ ಉದ್ಯಮಿ !!

Mudigere : ಇಂದು ಸರ್ಕಾರಿ ಶಾಲೆಗಳೆಂದರೆ ಮೂಗುಮುರಿಯುವವರೇ ಹೆಚ್ಚು. ಸರ್ಕಾರಿ ಶಾಲೆಗಳು ಕೇವಲ ಬಡವರಿಗಾಗಿ, ಮಧ್ಯಮ ವರ್ಗದವರಿಗಾಗಿ ಇರುವುದು ಎಂದು ಅನೇಕರು ಭಾವಿಸಿದ್ದಾರೆ. ರಾಜ್ಯದ ಯಾವ ಒಬ್ಬ ಸಿರಿವಂತ ಕೂಡ ಅಥವಾ ರಾಜಕಾರಣಿ ಕೂಡ ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಕಳಿಸುವುದಿಲ್ಲ. ಅವರೆಲ್ಲರೂ ಹೈಫೈ ಶಿಕ್ಷಣವನ್ನು ನೋಡಿ, ದುಪ್ಪಟ್ಟು ಹಣವನ್ನು ಸುರಿದು ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಕಳಿಸುತ್ತಾರೆ. ಆದರೆ ಇಂಥವರ ನಡುವೆ ಇನ್ನೊಬ್ಬ ಉದ್ಯಮಿ ಸರ್ಕಾರಿ ಶಾಲೆಗೆ ತನ್ನ ಮಗನನ್ನು ಸೇರಿಸಿ ಅದೇ ಶಾಲೆಗೆ ಬರೋಬ್ಬರಿ 2.18 ಕೋಟಿ ಅನುದಾನವನ್ನು ನೀಡಿದ್ದಾರೆ.

ಹೌದು ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಅಪರೂಪದ ಹಾಗೂ ವಿಶಿಷ್ಟ ಘಟನೆ ನಡೆದಿದೆ. ಅಲ್ಲದೆ ಇದು ಎಲ್ಲರಿಗೂ ಮಾದರಿಯಾಗುವಂತಹ ಒಂದು ನಡೆ. ಅದೇನೆಂದರೆ ಸರ್ಕಾರಿ ಶಾಲೆಯಲ್ಲಿ ಓದಿ, ಕಾಫಿ ರಫ್ತು ಉದ್ಯಮಿಯಾಗಿ ಗುರುತಿಸಿಕೊಂಡಿರುವ ಮುದ್ರೆಮನೆ ಕಾಫಿ ಕ್ಯೂರಿಂಗ್‌ ಸಂಸ್ಥೆಯ ಮಾಲೀಕ ಸಂತೋಷ್‌, ತಮ್ಮ ಘಟಕದ ಸಮೀಪದಲ್ಲೇ ಇರುವ ಸರ್ಕಾರಿ ಶಾಲೆಗೆ ತಮ್ಮ ಮಗನನ್ನು ವಿದ್ಯಾಭ್ಯಾಸಕ್ಕಾಗಿ ಸೇರಿಸಿದ್ದಾರೆ. ಅಷ್ಟೇ ಅಲ್ಲದೆ ಈ ಶಾಲೆಯ ಅಭಿವೃದ್ಧಿಗೆ ₹2.18 ಕೋಟಿ ನೆರವು ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಅಂದಹಾಗೆ ತಾಲ್ಲೂಕಿನ ಮುತ್ತಿಗೆಪುರ ಗ್ರಾಮದಲ್ಲಿರುವ ಈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸದ್ಯ 363 ವಿದ್ಯಾರ್ಥಿಗಳಿದ್ದಾರೆ. 1973ರಲ್ಲಿ ಪ್ರಾರಂಭವಾದ ಈ ಶಾಲೆಯು ಸದ್ಯ ಜಿಲ್ಲೆಯ ಮಾದರಿ ಸರ್ಕಾರಿ ಶಾಲೆಯಾಗಿದ್ದು, ಇಲ್ಲಿ ಪ್ರವೇಶ ಪಡೆಯಲು ಖಾಸಗಿ ಶಾಲೆಗಳಿಗಿಂತ ಹೆಚ್ಚಿನ ಪೈಪೋಟಿ ಇದೆ. ಉದ್ಯಮಿ ಸಂತೋಷ್‌ ನೀಡಿದ ನೆರವಿನಿಂದ 8 ಸುಸಜ್ಜಿತ ಕೊಠಡಿಗಳನ್ನು ನಿರ್ಮಿಸಲಾಗಿದೆ. ₹18 ಲಕ್ಷ ವೆಚ್ಚದಲ್ಲಿ ಸಭಾಂಗಣ ನಿರ್ಮಿಸಲಾಗಿದೆ. ವಿವೇಕ ಯೋಜನೆಯಡಿ ₹56 ಲಕ್ಷ ವೆಚ್ಚದಲ್ಲಿ 4 ಕೊಠಡಿಗಳನ್ನು ನಿರ್ಮಿಸಲಾಗಿದೆ. ಒಟ್ಟು 12 ಕೊಠಡಿಗಳನ್ನು ಫೆ. 28 ರಂದು ಉದ್ಘಾಟಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಟ್ಟಿನಲ್ಲಿ ಸ್ಥಳೀಯ ಉದ್ಯಮಿಗಳು ಈ ಶಾಲೆಯನ್ನು ಹೈಟೆಕ್ ಶಾಲೆಯನ್ನಾಗಿ ಹಾಗೂ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ಶಾಲೆಯನ್ನಾಗಿ ನಿರ್ಮಿಸುವಲ್ಲಿ ಪಣತೊಟ್ಟಿದ್ದಾರೆ. ಅದೇ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ. ಮೂಡಿಗೆರೆಯ ಈ ಉದ್ಯಮಿಗಳ ಇಂತಹ ಒಂದು ಮಹತ್ಕಾರ್ಯ ನಾಡಿನ ಎಲ್ಲಾ ಉದ್ಯಮಿಗಳಿಗೂ ಮಾದರಿಯಾಗಲಿ. ಸರ್ಕಾರಿ ಶಾಲೆಗಳೆಲ್ಲವೂ ಹೈಟೆಕ್ ಸ್ಪರ್ಶ ಪಡೆದು ಉತ್ತಮ ಶಿಕ್ಷಣವನ್ನು ನೀಡುವ ವಿದ್ಯಾ ದೇಗುಲಗಳಾಗಲಿ ಎಂಬುದು ನಮ್ಮ ಆಸೆ ಕೂಡ.

Comments are closed.