Putturu: ಔಷಧಿ ಬೇಕೆಂದು ಮೆಡಿಕಲ್ ಶಾಪ್ ಮಾಲಕಿಯ ಕರಿಮಣಿ ಸರ ಕಳ್ಳತನ; ಇಬ್ಬರ ಬಂಧನ

Puttur: ಆಯುರ್ವೇದ ಅಂಗಡಿಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ಮಹಿಳೆಯೊಬ್ಬರ ಮೂರುವರೆ ಪವನ್ ತೂಕದ ಕರಿಮಣಿ ಸರವನ್ನು ಎಗರಿಸಿದ ಘಟನೆ ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ನೀರ್ಚಾಲು ಎಂಬಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪುತ್ತೂರು ನಿವಾಸಿ ಆರೋಪಿಗಳಿಬ್ಬರನ್ನು ಫೆ.20 ರಂದು ಬೆಂಗಳೂರಿನಿಂದ ಬಂಧನ ಮಾಡಲಾಗಿರುವ ಕುರಿತು ಪೊಲೀಸರು ಮಾಹಿತಿ ನೀಡಿದ್ದಾರೆ.
ಕುಂಜೂರು ಪಂಜದ ಗೋಳಿಕಟ್ಟೆ ನಿವಾಸಿ ಸಂಶುದ್ದೀನ್ ಆಸ್ಕರ್ ಅಲಿ (28), ಬನ್ನೂರು ನಿವಾಸಿ ನೌಷಧ್ ಬಿ.ಎ (37) ಬಂಧಿತ ಆರೊಪಿಗಳು.
ಘಟನೆ ಹಿನ್ನೆಲೆ;
ಜ.11 ರಂದು ಸಂಜೆ ನೀರ್ಚಾಲು ಮೇಲಿನ ಪೇಟೆಯ ಜೇನುಮೂಲೆ ದಿ.ಡಾ.ಶಂಕರನಾರಾಯಣ ಭಟ್ಟರ ಪತ್ನಿ ಸರೋಜಿನಿ ಎಸ್.ಎನ್. ಅವರ ಮಾಲಕತ್ವದಲ್ಲಿರುವ ರಾಘವೇಂದ್ರ ಆಯುರ್ವೇದ ಮೆಡಿಕಲ್ ನಲ್ಲಿ ಕಳವು ಆಗಿತ್ತು. ಬೈಕ್‌ನಲ್ಲಿ ಬಂದ ಯುವಕರು ಎದೆನೋವಿಗೆ ಔಷಧಿ ಬೇಕೆಂದು ಮೆಡಿಕಲ್ ಶಾಪ್ ಒಳಗೆ ಬಂದು, ಮಾಲಕಿ ಸರೋಜಿನಿ ಅವರ ಕತ್ತಿನಲ್ಲಿದ್ದ ಮೂರುವರೆ ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು ಎಗರಿಸಿ ಹೊರಗಡೆ ಬೈಕ್‌ನಲ್ಲಿ ಕಾಯುತ್ತಿದ್ದ ಇನ್ನೋರ್ವ ಆರೋಪಿ ಜೊತೆ ಸೇರಿ ಪರಾರಿಯಾಗಿದ್ದರು.
ಈ ಕುರಿತು ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದು, ನಂತರ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಕಳವುಗೈದ ಚಿನ್ನವನ್ನು ಮಂಗಳೂರಿನ ಚಿನ್ನದಂಗಡಿಯಲ್ಲಿ ಮಾರಾಟ ಮಾಡಿದ್ದರು. ಇದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರು ಕಳ್ಳತನಕ್ಕೆ ಉಪಯೋಗಿಸಿದ ಬೈಕ್ ಕೂಡಾ ತಮಿಳುನಾಡಿನಿಂದ ಕಳ್ಳತನ ಮಾಡಲಾಗಿದೆ. ಟೆಸ್ಟ್ ಡ್ರೈವ್‌ಗೆಂದು ತೆಗೆದುಕೊಂಡು ಹೋದ ಬೈಕನ್ನು ಮರಳಿ ನೀಡದೆ ಕಳ್ಳತನ ಮಾಡಿದ್ದರಿಂದ ಬೈಕ್ ಮಾಲಕ ತಮಿಳುನಾಡು ಪೊಲೀಸರಿಗೆ ದೂರನ್ನು ನೀಡಿದ್ದರು. ಬೈಕ್ ಪತ್ತೆ ಮಾಡುತ್ತಾ ತಮಿಳುನಾಡು ಪೊಲೀಸರು ಬದಿಯಡ್ಕ ಬಂದಿದ್ದಾರೆ.
ಆರೋಪಿಗಳಲ್ಲಿ ಒಬ್ಬನಾದ ಸಂಶುದ್ದೀನ್ ವಿರುದ್ಧ ಪುತ್ತೂರು ಠಾಣೆಯಲ್ಲಿ 2023 ರಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು.
Comments are closed.