Yatnal: ಚಾಮುಂಡೇಶ್ವರಿ ಎದುರು ಫೈಲ್ ಇಟ್ಟು ಯತ್ನಾಳ್ ಪೂಜೆ- ಏನಿದೆ ಆ ಫೈಲ್ ನಲ್ಲಿ?

Yatnal: ಬಿಜೆಪಿಯ ರೆಬೆಲ್ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಿಜೆಪಿ ಹೈಕಮಾಂಡ್ ನೋಟಿಸ್ ಕೊಟ್ಟ ಬಳಿಕ ಅವರ ಬಣ ಕೊಂಚ ತಣ್ಣಗಾಗಿದೆ. ಈ ಮೂಲಕ ಯತ್ನಾಳ್ ಅವರಿಗೆ ಮುಖಭಂಗವಾಗಿದೆ. ಆದರೆ ಈ ಬೆನ್ನಲ್ಲೇ ಅಚ್ಚರಿ ಎಂಬಂತೆ ಎತ್ನಾಳ್ ಅವರು ನಾಡದೇವಿ ಚಾಮುಂಡೇಶ್ವರಿ ಸನ್ನಿಧಾನಕ್ಕೆ ತೆರಳಿ ಫೈಲ್ ಒಂದನ್ನು ಚಾಮುಂಡೇಶ್ವರಿ ಎದುರು ಇಟ್ಟು ಪೂಜೆ ಸಲ್ಲಿಸಿದ್ದಾರೆ. ಹೀಗಾಗಿ ನಾಡಿನ ಜನರ ಚಿತ್ತ ಆ ಫೈಲ್ನತ್ತ ಮೂಡಿದ್ದು ಅದರೊಳಗೆ ಏನಿದೆ ಎಂಬುದು ಕುತೂಹಲವಾಗಿದೆ.
ಹೌದು, ಅತ್ತ ಹೈಕಮಾಂಡ್ ನೋಟಿಸ್ ನೀಡಿದ್ರೆ, ಇತ್ತ ಶಕ್ತಿ ದೇವತೆ ಎದುರು ಫೈಲ್ ಇಟ್ಟು ಯತ್ನಾಳ್ ಪೂಜೆ ಸಲ್ಲಿಸಿದ್ದರು. ಅಷ್ಟಕ್ಕೂ ಆ ಫೈಲ್‌ನಲ್ಲಿ ಏನಿರಬಹುದು ಎನ್ನುವುದು ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಆ ಫೈಲ್‌ನಲ್ಲಿ ಕೇಂದ್ರ ನೋಟಿಸ್ ಗೆ ಉತ್ತರ ಕೊಟ್ಟ ಪ್ರತಿ ಇದೆಯಾ ಅಥವಾ ವಿಜಯೇಂದ್ರ ವಿರುದ್ಧ ಮತ್ತಷ್ಟು ದಾಖಲೆ ಇಟ್ಟು ಪೂಜೆ ಮಾಡಿಸಿದ್ರಾ ಎಂಬ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುವಂತೆ ಮಾಡಿತ್ತು. ಇದೀಗ ಇದೆಲ್ಲದಕ್ಕೂ ಯತ್ನಾಳ್ ಅವರೇ ಸ್ಪಷ್ಟೀಕರಣ ನೀಡಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಯತ್ನಾಳ್, ಸುಪ್ರೀಂ ಕೋರ್ಟ್ ಆದೇಶಾನುಸಾರ ನಮ್ಮ ಸಿದ್ದಸಿರಿ ಪವರ್ ಹಾಗೂ ಎಥನಾಲ್ ಕಾರ್ಖಾನೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಿದೆ. ಈ ಸಂಬಂಧ ನಾನು ನಾಡದೇವತೆ ಚಾಮುಂಡೇಶ್ವರಿ ಅಮ್ಮನವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಪೂಜೆ ಸಲ್ಲಿಸಿದ್ದೇನೆ. ಚಿಂಚೋಳಿ ತಾಲ್ಲೂಕಿನಲ್ಲಿರುವ ನಮ್ಮ ಕಾರ್ಖಾನೆ ಆರಂಭವಾಗುವುದರಿಂದ ನೂರಾರು ಉದ್ಯೋಗ ಸೃಷ್ಟಿಯಾಗುತ್ತದೆ ಹಾಗೂ ರೈತರ ಏಳಿಗೆಗೆ ನಾಂದಿಯಾಗುತ್ತದೆ ಎಂದು ಬರೆದುಕೊಂಡಿದ್ದಾರೆ.
Comments are closed.