Ankola: ಅಂಕೋಲಾದಲ್ಲಿ ಪತ್ತೆಯಾದ ಮಂಗಳೂರು ಮೂಲದ ಕಾರಿನಲ್ಲಿ ಕೋಟಿಗಟ್ಟಲೆ ಹಣ ಪತ್ತೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌

Ankola: ಮಂಗಳೂರು ಮೂಲದ ಕಾರೊಂದು ಜ.28 ರಂದು ಅಂಕೋಲಾದಲ್ಲಿ ಕೋಟಿಗಟ್ಟಲೆ ಹಣ ಪತ್ತೆಯಾದ ಸ್ಥಿತಿಯಲ್ಲಿ ಸಿಕ್ಕಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ದರೋಡೆ ಕೃತ್ಯವೆಂದು ಅಂಕೋಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಮಂಗಳೂರಿನ ಹೆಸರಾಂತ ಚಿನ್ನದ ವ್ಯಾಪಾರಿ ಹಾಗೂ ಇತರ ಮೂವರು ಅಂಕೋಲಾ ಠಾಣೆಗೆ ದೂರು ನೀಡಿರುವ ಕುರಿತು ವರದಿಯಾಗಿದೆ.

ಅಂಕೋಲಾ ತಾಲೂಕಿನ ರಾಮನಗುಳಿ ಬಳಿ ನಿರ್ಜನ ಪ್ರದೇಶದಲ್ಲಿ, ಹೆದ್ದಾರಿ ಪಕ್ಕ ಕಾಡಿನಲ್ಲಿ ಕಾರಿನ ಕಿಟಕಿ ಬಾಗಿಲಿನ ಗಾಜನ್ನು ಒಡೆದ ಸ್ಥಿತಿಯಲ್ಲಿ ಕಂಡು ಬಂದಿತ್ತು. ಪೊಲೀಸರಿಗೆ ಸಾರ್ವಜನಿಕರಿಂದ ಈ ಕುರಿತು ಮಾಹಿತಿ ದೊರಕಿದ್ದು, ಅಲ್ಲಿಗೆ ಆಗಮಿಸಿದ ಪೊಲೀಸರು ಕಾರಿನ ಬಾಗಿಲು ಪರಿಶೀಲನೆ ಮಾಡಿದಾಗ ಕಾರಿನಲ್ಲಿ ಕಬ್ಬಿಣದ ಬಾಕ್ಸ್‌ ಇರುವುದು ಕಂಡು ಬಂದಿದ್ದು, ಅದರಲ್ಲಿ 1.15 ಕೋಟಿ ಹಣ ಲಭ್ಯವಾಗಿತ್ತು.

ಕೋಟಿ ರೂ. ವಾರಸುದಾರರು ಯಾರೂ ಬಾರದೇ ಇದ್ದುದ್ದು, ಯಾವ ಉದ್ದೇಶಕ್ಕೆ ಯಾವ ಕಾರಣಕ್ಕೆ ಇದನ್ನು ಸಾಗಿಸಲಾಗುತ್ತಿತ್ತು ಎನ್ನುವ ಕುತೂಹಲ ಹಾಗೇ ಇತ್ತು. ಕಾರಿನ ಚಾಸಿಸ್‌ ನಂಬರ್‌ ಪ್ರಕಾರ ಇದು ಮಂಗಳೂರಿನ ಅಳಕೆಯಲ್ಲಿ ವಾಸವಾಗಿರುವ ಮಹಾರಾಷ್ಟ್ರದ ಖಾನಾಪುರ ಮೂಲದ ಆಭರಣಗಳ ತಯಾರಕ ವಿವೇಕ ಸುರೇಶ್‌ ಪವಾರ್‌ (26) ಅವರಿಗೆ ಸೇರಿದ್ದು ಎಂದು ತನಿಖೆಯಲ್ಲಿ ಗೊತ್ತಾಗಿತ್ತು.

ವಿವೇಕ ಪವಾರ್‌, ಮಂಗಳೂರು ಕಾರ್‌ ಸ್ಟ್ರೀಟ್‌ ನಿವಾಸಿ ರಾಜೇಂದ್ರ ಪ್ರಕಾಶ್‌ ಪವಾರ್‌, ಬಂಟ್ವಾಳದ ಪುಣಚ ನಿವಾಸಿ ಅಬ್ದುಲ್‌ ಸಮದ್‌ ಅಂದುನಿ ಮತ್ತು ಮಂಗಳೂರು ಜಪ್ಪು ಕುಡುಪಾಡಿ ನಿವಾಸಿ ಮಹಮ್ಮದ್‌ ಇಸಾಕ್‌ ಇವರು ಈ ಪ್ರಕರಣಕ್ಕೆ ಕುರಿತಂತೆ ಅಂಕೋಲಾ ಪೊಲೀಸ್‌ ಠಾಣೆಗೆ ಹಾಜರಾಗಿದ್ದಾರೆ. ಹಾಗೂ ದರೋಡೆ ಕುರಿತು ದೂರನ್ನು ನೀಡಿರುವ ಕುರಿತು ವರದಿಯಾಗಿದೆ. ಹೆದರಿ ತಡವಾಗಿ ದೂರು ನೀಡುತ್ತಿರುವುದಾಗಿ ಅವರು ಹೇಳಿದ್ದಾರೆ.

ಮಂಗಳೂರಿನ ರಾಜೇಂದ್ರ ಪವಾರ್‌ ಅವರ ಕಾರು ಚಾಲಕ ಮಹಮ್ಮದ್‌ ಇಸಾಕ್‌ ಅವರು ರಾಜೇಂದ್ರ ಅವರ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದ ಆಕಾಶ್‌ ಪವಾರ್‌ ಸೂಚನೆ ಮೇರೆಗೆ ಬೆಳಗಾವಿಯ ಸಚಿನ್‌ ಜಾಧವ ಎನ್ನುವವರಿಗೆ ಬಂಗಾರ ತಲುಪಿಸಿ ಹಣ ತರಲು ಇನ್ನೋರ್ವ ಚಾಲಕ ಅಬ್ದುಲ್‌ ಸಮದ್‌ ಜೊತೆ ಜ.26 ರಂದು ಬೆಳಗ್ಗೆ 3.45 ಕ್ಕೆ ಕೆ.ಎ.19 ಎಂ.ಪಿ 1036 ರಲ್ಲಿ ಹೊರಟಿದ್ದಾರೆ. ಅವರು ಸೀಟಿನ ಕೆಳಗೆ ಇರುವ ಲಾಕರ್‌ನಲ್ಲಿ ಬಂಗಾರ ಇಟ್ಟು ಕಾರಿನ ನಂಬರ್‌ ಪ್ಲೇಟ್‌ ಬದಲಾಯಿಸಿ ಕೆ.ಎ.51 ಎಂ.ಬಿ.9634 ನಂಬರ್‌ ಪ್ಲೇಟ್‌ ಅಳವಡಿಸಿ ಬೆಳಗಾವಿಗೆ ಹೊರಟಿದ್ದರು. ಇವರ ಬೆಳಗಾವಿಗೆ ಸುಮಾರು 11.30 ಕ್ಕೆ ತಲುಪಿದ್ದು, ತುಷಾರ್‌ ಎನ್ನುವಾತ 2.95 ಕೋಟಿ ರೂ. ನೀಡಿ ಬಂಗಾರ ತೆಗೆದುಕೊಂಡು ಹೋಗಿದ್ದರು. ಇದರಲ್ಲಿ 1.80 ಕೋಟಿ ಹಣ ಡ್ರೈವರ್‌ ಸೀಟಿನ ಕೆಳಗಡೆ, 1.15 ಕೋಟಿ ಹಣ ಹಿಂಬದಿ ಸೀಟಿನ ಅಡಿಯಲ್ಲಿರುವ ಲಾಕರ್‌ನಲ್ಲಿ ಇಡಲಾಗಿತ್ತು. ನಂತರ ಯಲ್ಲಾಪುರ ದಾಟಿ ಅಂಕೋಲಾ ಕಡೆ ಬರುತ್ತಿದ್ದ ಸಂದರ್ಭದಲ್ಲಿ ಸಂಜೆ ನಾಲ್ಕರ ವೇಳೆಗೆ ಬಿಳಿ ಬಣ್ಣದ ಸ್ಕ್ರಿಪ್ಟ್‌ ಕಾರು ಓವರ್‌ಟೇಕ್‌ ಮಾಡಿ ಬಂದಿದ್ದು, ಐದು ಜನ ಅಪರಿಚಿತ ವ್ಯಕ್ತಿಗಳು ತಲವಾರ್‌, ಚಾಕು ಹಿಡಿದು ಅಡ್ಡಗಟ್ಟಿದ್ದಾರೆ. ಅನಂತರ ಕಾರಿನ ಗಾಜುಗಳನ್ನು ಒಡೆದಿದ್ದಾರೆ. ಇಬ್ಬರು ಚಾಲಕರ ಮೊಬೈಲ್‌, ಪರ್ಸ್‌ ಕಸಿದು ಕಾರನ್ನು ಅಪಹರಿಸಿ ಚಾಲಕನ ಸೀಟಿನ ಅಡಿ ಇದ್ದ 1.75 ಕೋಟಿ ರೂ. ದರೋಡೆ ಮಾಡಿ ನಂತರ ಕಾರನ್ನು ರಾಮನಗುಳಿ ಬಳಿ ಬಿಟ್ಟು ಹೋಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

Comments are closed.