Bangalore: ಅಣ್ಣನ ನೋಡಲು ಜೈಲಿಗೆ ಹೋದ ತಮ್ಮ ಪೊಲೀಸರ ಅತಿಥಿ

Bangalore: ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೊಪಿಯೋರ್ವ ಎಐ ಫೇಸ್‌ ರೆಕಗ್ನಿಷಿಯನ್‌ ಕ್ಯಾಮರಾದಿಂದ ಪೊಲೀಸರ ಅತಿಥಿಯಾಗಿರುವ ಘಟನೆಯೊಂದು ನಡೆದಿದೆ.

ಅಪ್ರೋಜ್‌ ಪಾಷಾ ಎಂಬಾತನೇ ಬಂಧಿತ ಆರೋಪಿ. ಈತ ಡಕಾಯಿತಿ ಪ್ರಕರಣದಲ್ಲಿ ಜಾಮೀನು ಪಡೆದು ನಂತರ ಕೋರ್ಟ್‌ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಅಪ್ರೋಜ್‌ನನ್ನು ಮಡಿವಾಳ ಪೊಲೀಸರು ಬಂಧನ ಮಾಡಿದ್ದಾರೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ತನ್ನ ಸಹೋದರನನ್ನು ಭೇಟಿಯಾಗಲು ತೆರಳಿದ್ದ ಅಪ್ರೋಜ್‌ ಪಾಷಾ ಕುರಿತು ಜೈಲಿನ ಅಧಿಕಾರಿಗಳು ನೀಡಿದ ಮಾಹಿತಿಯ ಮೇರೆಗೆ ಬಂಧನ ಮಾಡಲಾಗಿದೆ.

ಮಡಿವಾಳ ಪೊಲೀಸ್‌ ಠಾಣೆಯಲ್ಲಿ ಹತ್ತು ವರ್ಷಗಳ ಹಿಂದೆ ಡಕಾಯಿತಿ ಪ್ರಕರಣದಲ್ಲಿ ಜೈಲು ಸೇರಿದ್ದ ಅಪ್ರೋಜ್‌, ನಂತರ ಜಾಮೀನು ಪಡೆದುಕೊಂಡಿದ್ದ. ಅನಂತರ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈತನ ಬಂಧನಕ್ಕೆ ಹಲವು ಬಾರಿ ವಾರಂಟ್‌ ಜಾರಿ ಮಾಡಲಾಗಿತ್ತು. ಪೊಲೀಸರು ನಂತರ ಎಷ್ಟೇ ಹುಡುಕಾಡಿದರೂ ಈತ ಸಿಕ್ಕಿರಲಿಲ್ಲ.

ಎಐ ಫೇಸ್‌ ರೆಕಗ್ನಿಷನ್‌ ಕ್ಯಾಮೆರಾದಲ್ಲಿ ಅಪ್ರೋಜ್‌ ಮುಖ ಸ್ಕ್ಯಾನ್‌ ಆಗುತ್ತಿದ್ದಂತೆ ಆತನೇ ಹಳೇ ಪ್ರಕರಣದ ಕುರಿತು ಮಾಹಿತಿ ದೊರಕಿದೆ. ಆಗ ಜೈಲಿನ ಅಧಿಕಾರಿಗಳು ಮಡಿವಾಳ ಠಾಣೆಗೆ ಮಾಹಿತಿಯನ್ನು ನೀಡಿದ್ದರು. ಮಡಿವಾಳ ಪೊಲೀಸರು ಕೂಡಲೇ ಕೇಂದ್ರ ಕಾರಾಗೃಹಕ್ಕೆ ತೆರಳಿ ಆರೋಪಿಯನ್ನು ಬಂಧನ ಮಾಡಿದ್ದಾರೆ.

Comments are closed.