Karawara: ಕಾರವಾರ ನೌಕಾನೆಲೆಯ ಮಾಹಿತಿ ಪಾಕ್‌ ಬೆಡಗಿಗೆ ನೀಡಿದ ಇಬ್ಬರು ಅರೆಸ್ಟ್‌; ಪ್ರತಿ ತಿಂಗಳು 5000 ಜಮೆ

Share the Article

Karawara: ಪಾಕಿಸ್ತಾನದ ಏಜೆಂಟ್‌ ಜೊತೆ ಐಎನ್‌ಎಸ್‌ ಕದಂಬ ನೌಕಾ ನೆಲೆಯ ಮಾಹಿತಿಗಳನ್ನು ಹಂಚಿಕೊಂಡ ಆರೋಪದ ಮೇಲೆ ಹೈದರಾಬಾದ್‌ನ ರಾಷ್ಟ್ರೀಯ ತನಿಖಾದಳ ತಂಡ ಇಬ್ಬರು ಆರೋಪಿಗಳನ್ನು ಕಾರವಾರದಲ್ಲಿ ಬಂಧನ ಮಾಡಿದೆ.

ಕಾರವಾರ ತಾಲೂಕಿನ ಮುದುಗಾದ ವೇತನ್‌ ತಾಂಡೇಲ್‌, ಹಳವಳ್ಳಿಯ ಅಕ್ಷಯ್‌ ನಾಯ್ಕ್‌ ಬಂಧಿತ ಆರೋಪಿಗಳು.

2023ರಲ್ಲಿ ಆರೋಪಿಗಳು ಫೇಸ್‌ಬುಕ್‌ನಲ್ಲಿ ಪರಿಚಯಾಗಿದ್ದ ಪಾಕ್‌ನ ಏಜೆಂಟ್‌ ಮಹಿಳೆಯ ಜೊತೆ ಮಾಹಿತಿಯನ್ನು ಹಂಚಿಕೊಂಡಿದ್ದು, ಆಕೆ ತಾನು ನೌಕಾದಳದ ಅಧಿಕಾರಿ ಎಂದು ಪರಿಚಯ ಮಾಡಿಕೊಂಡಿದ್ದು, ನೌಕಾದಳದ ನೌಕೆಗಳು, ಅದರ ಚಲನವಲನ, ನೌಕೆಗಳ ಚಿತ್ರಗಳು, ಕದಂಬ ನೌಕಾದಳದ ಸ್ಥಳಗಳ ಮಾಹಿತಿಯನ್ನು ಆರೋಪಿಗಳಿಂದ ಪಡೆದಿದ್ದರು ಎಂದು ತನಿಖೆಯನ್ನು ತಿಳಿದು ಬಂದಿದೆ.

ಇದಕ್ಕೆ ಪ್ರತಿಯಾಗಿ ರೂ.5000 ಎಂಟು ತಿಂಗಳ ಕಾಲ ಮೂವರ ಖಾತೆಗೆ ದೀಪಕ್‌ ಎನ್ನುವ ಹೆಸರಿನ ಖಾತೆಯಿಂದ ಕಳುಹಿಸಲಾಗುತ್ತಿತ್ತು. 2023 ರಲ್ಲಿ ಎನ್‌ಐಎ ತಂಡ ದೀಪಕ್‌ ಹಾಗೂ ಆತನ ತಂಡವನ್ನು ಬಂಧನ ಮಾಡಿದಾಗ ಕಾರವಾರದ ಮೂವರು ಮಾಹಿತಿ ನೀಡುತ್ತಿರುವ ಕುರಿತು, ಹಾಗೂ ನೌಕಾದಳದ ಅಧಿಕಾರಿಗಳು ಹನಿಟ್ರ್ಯಾಪ್‌ಗೆ ಒಳಗಾಗಿರುವ ಮಾಹಿತಿ ದೊರಕಿತ್ತು.

ಆಗಸ್ಟ್‌ 28,2023 ರಂದು ಕಾರವಾರದಲ್ಲಿ ಮುದುಗಾದ ವೇತನ್‌ ತಾಂಡೇಲ್‌, ತೋಡೂರಿನ ಸುನೀಲ್‌ ಹಾಗೂ ಹಳವಳ್ಳಿಯ ಅಕ್ಷಯ್‌ ನಾಯ್ಕ್‌ ಈ ಮೂವರನ್ನು ವಶಕ್ಕೆ ಪಡೆದಿದ್ದು, ಎಲೆಕ್ಟ್ರಾನಿಕ್‌ ಉಪಕರಣ, ಮೊಬೈಲ್‌ ವಶಕ್ಕೆ ಪಡೆದ ಎನ್‌ಐಎ ತನಿಖೆಗೆ ಹಾಜರಾಗಲು ನೋಟಿಸನ್ನು ಜಾರಿ ಮಾಡಿತ್ತು.

ನಂತರ ಹೈದರಾಬಾದ್‌, ಬೆಂಗಳೂರು ಎನ್‌ಐಎ ತಂಡ ಇದೀಗ ಮತ್ತೆ ಇಬ್ಬರನ್ನು ಬಂಧನ ಮಾಡಿದೆ. ಕಾರವಾರದ ಕ್ರಿಮ್ಸ್‌ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗೆಂದು ಹೈದರಾಬಾದ್‌ ಅಥವಾ ದೆಹಲಿಗೆ ಕರೆದೊಯ್ಯುವ ಸಂಭವನೀಯತೆ ಇದೆ ಎನ್ನಲಾಗಿದೆ.

ವೇತನ್‌ ಹಾಗೂ ಅಕ್ಷಯ್‌ ಗುತ್ತಿಗೆ ಆಧಾರದಲ್ಲಿ ಕಾರವಾರದ ಚೆಂಡಿಯಾದಲ್ಲಿ ಇರುವ ಮರ್ಕ್ಯುರಿ ಹಾಗೂ ಅಲ್ಟ್ರಾ ಮರೈನ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ಕಂಪನಿ ಕದಂಬ ನೌಕಾನೆಲೆಯಲ್ಲಿ ಯುದ್ಧ ನೌಕೆಗಳ ರಿಪೇರಿ ಕಾರ್ಯ ಮಾಡುತ್ತದೆ. ತೋಡೂರಿನ ಸುನಿಲ್‌ ಕದಂಬ ನೌಕಾನೆಲೆಯ ನೇವಿ ಕ್ಯಾಂಟೀನ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದು, ನಂತರ ಚಾಲಕ ಕೆಲಸ ಮಾಡುತ್ತಿದ್ದ. ಫೇಸ್‌ಬುಕ್‌ನಲ್ಲಿ ಪಾಕಿಸ್ತಾನದ ಮಹಿಳಾ ಏಜೆಂಟ್‌ 2023 ರಲ್ಲಿ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿದ ನಂತರ ಈ ಮೂವರು ಈ ಮಹಿಳೆಗೆ ಬಹಳ ಹತ್ತಿರವಾಗಿದ್ದರು.

ದೀಪಕ್‌ನನ್ನು ಮಧ್ಯವರ್ತಿಯಾಗಿ ಬಳಸಿ ಇವರಿಗೆ ಮಾಹಿತಿ ನೀಡಲು ತಲಾ 5000 ರೂ. ಹಣ ಸಂದಾಯ ಮಾಡುತ್ತಿದ್ದಳು. ದೀಪಕ್‌ ಬಂಧನವಾಗುತ್ತಿದ್ದಂತೆ ಸುನಿಲ್‌ ನೌಕಾ ನೆಲೆಯಲ್ಲಿ ತನ್ನ ಕೆಲಸ ಬಿಟ್ಟು ಗೋವಾದ ರೆಸ್ಟೋರೆಂಟ್‌ವೊಂದರಲ್ಲಿ ಕೆಲಸಕ್ಕೆ ಸೇರಿದ್ದ. ವೇತನ್‌ ತಾಂಡೇಲ್‌ ಕೂಡಾ ಕೆಲಸ ಬಿಟ್ಟಿದ್ದು, ಈತ ನೌಕಾನೆಲೆಯಲ್ಲಿ ಕೆಲಸ ಮಾಡುವ ಕೆಲವೊಂದು ತನ್ನ ಸ್ನೇಹಿತರು ಮತ್ತು ಸಂಬಂಧಿಕರಿಂದ ಮಾಹಿತಿ ಪಡೆದು ಪಾಕಿಸ್ತಾನದ ಏಜೆಂಟ್‌ಗೆ ಕಳುಹಿಸುತ್ತಿದ್ದ.

 

 

Comments are closed.