B S Yeddyurappa: ಪೋಕ್ಸೋ ಪ್ರಕರಣ – ತನಿಖೆಯಲ್ಲಿ ಬಾಲಕಿಯ ಕೈ ಹಿಡಿದಿರುವುದನ್ನು ಒಪ್ಪಿಕೊಂಡ ‘ಮಾಜಿ ಸಿಎಂ ಯಡಿಯೂರಪ್ಪ’

B S Yeddyurappa : ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್ ಪ್ರಕರಣ ಸಂಬಂಧ ಸಿಐಡಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ಇದರಲ್ಲಿ ಯಡಿಯೂರಪ್ಪ ಅವರು ಅಪ್ರಾಪ್ತೆಯ ಕೈ ಹಿಡಿದಿರೋದನ್ನು ಒಪ್ಪಿಕೊಂಡಿರೋದಾಗಿ ತಿಳಿದು ಬಂದಿದೆ.

ಫೆಬ್ರವರಿ 2, 2024 ರಂದು ಬೆಂಗಳೂರಿನ ಸಂಜಯನಗರದಲ್ಲಿರುವ ತಮ್ಮ ನಿವಾಸ ‘ಧವಳಗಿರಿ’ಯಲ್ಲಿ 17 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ 81 ವರ್ಷದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮೇಲಿದೆ. ಈ ಪ್ರಕರಣವನ್ನು ಸರ್ಕಾರ ಎಸ್ಐಟಿಗೆ ವಹಿಸಿತ್ತು. ನಂತರ ಇದನ್ನು ಸಿಐಡಿ ಗೆ ವರ್ಗಾಯಿಸಲಾಯಿತು. ತನಿಖೆ ವೇಳೆ ಜೂನ್ 17, 2024 ರಂದು ಎಸ್‌ಐಟಿಗೆ ನೀಡಿದ ಹೇಳಿಕೆಯಲ್ಲಿ, ಯಡಿಯೂರಪ್ಪ ಅವರು ಅಪ್ರಾಪ್ತ ಬಾಲಕಿಯನ್ನು ಪ್ರತ್ಯೇಕ ಕೋಣೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪಗಳನ್ನು ನಿರಾಕರಿಸಿದ್ದಾರೆ. ಆದರೆ, ಯಡಿಯೂರಪ್ಪ ಅವರು “ನಾನು ಅವರ ಕೈ ಹಿಡಿದು ಅವರಿಗೆ ಆಗಿರುವ ಅನ್ಯಾಯದ ಬಗ್ಗೆ ಕೇಳಿದೆ” ಎಂದು ಒಪ್ಪಿಕೊಂಡರು ಎಂಬುದಾಗಿ ಎಸ್‌ಐಟಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.

ಏನಿದು ಪ್ರಕರಣ?
ಬಾಲಕಿ ಮತ್ತು ಆಕೆಯ ತಾಯಿ 2015 ರಿಂದ ಅಪ್ರಾಪ್ತ ಬಾಲಕಿ ಮತ್ತು ಅವಳ ಸೋದರಸಂಬಂಧಿಯನ್ನು ಒಳಗೊಂಡ ಹಳೆಯ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಹಾಯಕ್ಕಾಗಿ ಯಡಿಯೂರಪ್ಪ ಅವರನ್ನು ಸಂಪರ್ಕಿಸಿದ್ದರು. ಯಡಿಯೂರಪ್ಪ ಅವರು ಬಾಲಕಿಯನ್ನು ಪ್ರಶ್ನಿಸುವ ನೆಪದಲ್ಲಿ ಪ್ರತ್ಯೇಕ ಕೋಣೆಗೆ ಕರೆದೊಯ್ದು ನಂತರ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ. ಅಲ್ಲದೆ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸಂತ್ರಸ್ತೆಯ ತಾಯಿ ಮಾರ್ಚ್​ 3ರಂದು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ತಮ್ಮ ಮಗಳಿಗೆ ಯಡಿಯೂರಪ್ಪ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಬಳಿಕ ರಾಜ್ಯ ಸರ್ಕಾರವು ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು.

Comments are closed.