Mangaluru : ನಾಪತ್ತೆಯಾಗಿದ್ದ 300 ವರ್ಷ ಹಳೆಯ ದೈವಸ್ಥಾನ ಪತ್ತೆ – ಪ್ರಶ್ನಾ ಚಿಂತನೆ ನಡೆಸಿ ಬೆಚ್ಚಿಬಿದ್ದ ಗ್ರಾಮಸ್ಥರು !!

Mangaluru : ಕರ್ನಾಟಕದ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ದೇವರಿಗಿಂತ ದೈವಗಳಿಗೆ ಮೊದಲ ಸ್ಥಾನ. ದೈವ ದೇವರುಗಳ ಪಡೆಯಿಲ್ಲದೆ ಇಲ್ಲಿ ಏನು ನಡೆಯುವುದಿಲ್ಲ. ಸಾವಿರಾರು ವರ್ಷಗಳಿಂದ ತುಳುನಾಡಿನ ಜನರು ದೈವಗಳ ಆರಾಧನೆ ಮಾಡಿಕೊಂಡು ಬಂದಿದ್ದಾರೆ. ಹೀಗಾಗಿ ದೈವಗಳ ಆರಾಧನೆ ನಡೆಯುವ ದೈವಸ್ಥಾನಗಳು ಪ್ರತಿ ಊರಿನಲ್ಲಿಯೂ ಇವೆ. ಆದರೀಗ ಅಚ್ಚರಿ ಎಂಬಂತೆ ಮಂಗಳೂರು ತಾಲೂಕಿನ ಪೆದಮಲೆ ಎಂಬಲ್ಲಿ 300 ವರ್ಷಗಳ ಹಿಂದೆ ನೆಲಸಮವಾಗಿದ್ದ ದೈವಸ್ಥಾನದ ಕುರುಹು ಪತ್ತೆಯಾಗಿದೆ. ಈ ಬೆನ್ನಲ್ಲೇ ಹೊಸ ದೈವಸ್ಥಾನ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಹೌದು, ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕಿನ ನೀರುಮಾರ್ಗದ ಪೆದಮಲೆ ಗ್ರಾಮದಲ್ಲೊಂದು ಅಚ್ಚರಿಯ ವಿದ್ಯಮಾನ ನಡೆದಿದ್ದು, ಮಣ್ಣಿನಡಿ ಹುದುಗಿ ಹೋಗಿದ್ದ 300 ವರ್ಷಗಳ ಹಳೆಯ ದೈವಸ್ಥಾನವೊಂದು ಪತ್ತೆಯಾಗಿದ್ದು, ತುಳುನಾಡಿನ ಕಾರ್ಣಿಕ ದೈವದ ಇರುವಿಕೆ ಕಂಡು ಗ್ರಾಮಸ್ಥರು ಬೆಚ್ಚಿಬೀಳುವಂತಾಗಿದೆ. ದೈವದ ಮುನಿಸಿನಿಂದ ತೊಂದರೆಗೀಡಾದ ಗ್ರಾಮಸ್ಥರಿಗೆ ಪ್ರಶ್ನಾಚಿಂತನೆಯಲ್ಲಿ ಈ ದೈವಸ್ಥಾನದ ಸುಳಿವು ದೊರೆತಿದೆ.
ಗ್ರಾಮದಲ್ಲಿ ಹೆಚ್ಚಿದ್ದ ಸಾವು-ನೋವು:
ಗ್ರಾಮದಲ್ಲಿ ಮನೆಗಳಿಗೆ ಆಗಾಗ ನಾಗರಹಾವು ಪ್ರವೇಶಿಸುವುದು, ಆತ್ಮಹತ್ಯೆ, ಸಾವು-ನೋವು ಹೆಚ್ಚಳವಾಗಿತ್ತು. ನಿರಂತರ ನೆಮ್ಮದಿ ಇಲ್ಲದೇ ಹಲವು ಮನೆಯವರು ಗ್ರಾಮವನ್ನೇ ತೊರೆದಿದ್ದರು. ಹೀಗಾಗಿ ಪಾಳು ಬಿದ್ದಿದ್ದ ಉಮಾಮಹೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಗ್ರಾಮಸ್ಥರು ಮುಂದಾಗಿದ್ದರು. ಈ ವೇಳೆ ದೇವಸ್ಥಾನದಲ್ಲಿ ಪ್ರಶ್ನಾಚಿಂತನೆ ನಡೆಸಲಾಗಿತ್ತು. ಅದರಲ್ಲಿ, ವಾಜಿಲ್ಲಾಯ ದೈವಸ್ಥಾನದ ಸುಳಿವು ಪತ್ತೆಯಾಗಿದೆ.
ದೈವಸ್ಥಾನ ಪತ್ತೆಯಾಗಿದ್ದು ಹೇಗೆ?
ಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟ ಮಂಗಲ ಪ್ರಶ್ನೆ ಸಂದರ್ಭದಲ್ಲಿ ಈ ದೈವಸ್ಥಾನದಲ್ಲಿ 300 ವರ್ಷಗಳಿಂದ ದೈವದ ಸೇವೆಗಳಾದ ನೇಮಗಳು ನಡೆಯುತ್ತಿಲ್ಲ ಎಂಬುದು ತಿಳಿದುಬಂದಿದೆ. ಇಲ್ಲೊಂದು ದೈವಸ್ಥಾನ ಇತ್ತೆಂಬುದು ಈಗ ಇರುವ ಯಾರಿಗೂ ತಿಳಿದಿರಲಿಲ್ಲ. ಆದರೆ ದೈವದ ಚಾವಡಿ ಇರುವ ಕಡೆ ಜನರು ದೈವಕ್ಕೆ ಶುಭ ಸಮಾರಂಭಗಳ ವೇಳೆ ಹೂವು ಹಾಕುತ್ತಿದ್ದರು. ಆದರೆ ಅದು ಯಾವ ದೈವದ ಚಾವಡಿ ಎಂಬುದು ಯಾರಿಗೂ ತಿಳಿದಿರಲಿಲ್ಲ. ಈ ದೈವಸ್ಥಾನದ ಕುರುಹು ಸಿಕ್ಕ ಬಳಿಕ ಮತ್ತೆ ಅದೇ ಜಾಗದಲ್ಲಿ ಪ್ರಶ್ನಾ ಚಿಂತನೆಗಳನ್ನು ನಡೆಸಿದ ವೇಳೆ ಇಲ್ಲಿ ವಾಜಿಲ್ಲಾಯ- ಧೂಮವತಿ ದೈವಸ್ಥಾನ ಇತ್ತು ಎಂಬುದು ತಿಳಿದುಬಂದಿದೆ.
ಬಳಿಕ ಶೋಧ ಕಾರ್ಯಾ ನಡೆಸಿದಾಗ ಸಂಪೂರ್ಣ ಶಿಥಿಲಗೊಂಡ ದೈವಸ್ಥಾನದ ಸುತ್ತುಪೌಳಿ ಹಾಗೂ ಗರ್ಭಗುಡಿಯ ಪಂಚಾಂಗ ಮಾತ್ರ ಕಾಣುತ್ತಿತ್ತು. ಸುಮಾರು 20 ಸೆಂಟ್ಸ್ ಜಾಗದಲ್ಲಿ ಗಿಡ, ಬೃಹತ್ ಗಾತ್ರದ ಮರ ಬಳ್ಳಿಯಿಂದಾವೃತವಾದ ಈ ಪ್ರದೇಶವನ್ನು ಜನರು ಬನ ಎಂದೇ ಕರೆಯುತ್ತಿದ್ದರು. ಈ ಜಾಗಕ್ಕೆ ಜನಸಂಚಾರವಿಲ್ಲದೆ ಶತಮಾನವೇ ಕಳೆದಿತ್ತು. ಇಲ್ಲಿ ದೈವಸ್ಥಾನದ ಧ್ವಜ ಸ್ಥಂಭದ ಬುಡವೊಂದರ ದಂಬೆ ಕಲ್ಲು ಸಿಕ್ಕಿದ್ದು, ಅದರ ಒಂದು ಬದಿ ಕುದುರೆ ಮೇಲೆ ರಾಜನೊಬ್ಬನ ಕೆತ್ತನೆ ಹಾಗೂ ಇನ್ನೊಂದು ಬದಿ ಸೂರ್ಯ ಚಂದ್ರರ ಸುಂದರ ಕೆತ್ತನೆ ಇದೆ. ಇನ್ನು ಸ್ಥಳದಲ್ಲಿ ಗಂಟೆ ಸೇರಿದಂತೆ ಹಲವು ವಸ್ತುಗಳು ಸಿಕ್ಕಿವೆ.
ಅದರಂತೆ ಈ ದೈವಸ್ಥಾನವನ್ನು ಪುನರ್ ಕಟ್ಟುವ ಕಾರ್ಯಕ್ಕೆ ಊರವರು ತೀರ್ಮಾನ ಮಾಡಿದ್ದಾರೆ. ಇದಕ್ಕಾಗಿ ಗಿರಿಧರ್ ಶೆಟ್ಟಿ ಎಂಬವರ ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇತ್ರ ಪೆದಮಲೆ ಶ್ರೀ ವಾಜಿಲ್ಲಾಯ ಧೂಮಾವತಿ ದೈವಸ್ಥಾನ ಟ್ರಸ್ಟ್ ಎಂಬುದನ್ನು ರಚಿಸಿ ದೈವಸ್ಥಾನದ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ.
Comments are closed.