Girls Marriage: 9 ವರ್ಷದ ಬಾಲಕಿಯರೊಂದಿಗೆ ವಿವಾಹಕ್ಕೆ ಅವಕಾಶ; ಇರಾಕ್‌ನಿಂದ ಹೊಸ ಮಸೂದೆಗೆ ಅಂಗೀಕಾರ

Share the Article

Girls Marriage: ಇರಾಕ್‌ನ ಸಂಸತ್ತು ಮಂಗಳವಾರ (ಜನವರಿ 21) ಮೂರು ವಿವಾದಾತ್ಮಕ ಕಾನೂನುಗಳನ್ನು ಅಂಗೀಕರಿಸಿದೆ. ಅವುಗಳಲ್ಲಿ ಒಂದು ಕಾನೂನು ಧರ್ಮಗುರುಗಳಿಗೆ ಹೆಣ್ಣುಮಕ್ಕಳ ಮದುವೆ ವಯಸ್ಸನ್ನು ನಿರ್ಧರಿಸುವ ಹಕ್ಕನ್ನು ನೀಡಿದೆ. ಈ ಕ್ರಮವು ಮಹಿಳಾ ಹಕ್ಕುಗಳ ಸಂಘಟನೆಗಳು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರಲ್ಲಿ ಕಳವಳವನ್ನು ಉಂಟುಮಾಡಿದೆ.

1959 ರ ಇರಾಕಿ ಕಾನೂನಿನ ಪ್ರಕಾರ, ಹೆಣ್ಣುಮಕ್ಕಳ ಮದುವೆಗೆ ಕನಿಷ್ಠ ವಯಸ್ಸು 18 ವರ್ಷಗಳು. ಆದರೆ ಹೊಸ ಕಾನೂನಿನ ಅಡಿಯಲ್ಲಿ, ಪಾದ್ರಿಗಳಿಗೆ ಇಸ್ಲಾಮಿಕ್ ಕಾನೂನನ್ನು ಅರ್ಥೈಸುವ ಹಕ್ಕನ್ನು ನೀಡಲಾಗಿದೆ. ಇದು 9 ವರ್ಷ ವಯಸ್ಸಿನ ಹುಡುಗಿಯರಿಗೆ ಮದುವೆಯ ಸಾಧ್ಯತೆಯನ್ನು ತೆರೆಯುತ್ತದೆ. ಈ ಬದಲಾವಣೆಯು ಜಾಫಾರಿಯ ಇಸ್ಲಾಮಿಕ್ ಸಿದ್ಧಾಂತವನ್ನು ಅನುಸರಿಸುತ್ತದೆ, ಇದನ್ನು ಇರಾಕ್‌ನಲ್ಲಿ ಅನೇಕ ಶಿಯಾ ಧಾರ್ಮಿಕ ಮುಖಂಡರು ಅನುಸರಿಸುತ್ತಾರೆ.

ಇಸ್ಲಾಮಿಕ್ ತತ್ವಗಳಿಗೆ ಅನುಗುಣವಾಗಿ ಈ ತಿದ್ದುಪಡಿಗಳನ್ನು ಮಾಡಲಾಗಿದೆ ಎಂದು ಶಿಯಾ ಪರ ಮುಖಂಡರು ಹೇಳುತ್ತಾರೆ. ಈ ಕಾನೂನು ಪಾಶ್ಚಿಮಾತ್ಯ ನಾಗರಿಕತೆಯ ಸಾಂಸ್ಕೃತಿಕ ಪ್ರಭಾವಗಳನ್ನು ನಿಲ್ಲಿಸಲು ಮತ್ತು ಇಸ್ಲಾಮಿಕ್ ಮೌಲ್ಯಗಳನ್ನು ರಕ್ಷಿಸುತ್ತದೆ ಎಂದು ಅವರ ವಾದ.

ಮಾನವ ಹಕ್ಕುಗಳ ಸಂಘಟನೆಗಳು ಮತ್ತು ಮಹಿಳಾ ಸಂಘಟನೆಗಳು ಈ ಕಾನೂನನ್ನು ತೀವ್ರವಾಗಿ ಟೀಕಿಸಿವೆ. ಈ ಕಾನೂನು ಮಹಿಳೆಯರ ಸ್ವಾತಂತ್ರ್ಯ ಮತ್ತು ಭದ್ರತೆಗೆ ಧಕ್ಕೆ ತರಬಹುದು. ಮಹಿಳೆಯರನ್ನು ಮನೆಯಲ್ಲಿ ಬಂಧಿಸಿ ಅವರ ಹಕ್ಕುಗಳನ್ನು ಉಲ್ಲಂಘಿಸಬಹುದು ಎಂದು ಸಂಘಟನೆಗಳು ವಾದ ಮಾಡುತ್ತಿದೆ.

ಇರಾಕ್ ಸಂಸತ್ತು ಸಾಮಾನ್ಯ ಕ್ಷಮಾದಾನ ಕಾನೂನನ್ನು ಅಂಗೀಕರಿಸಿದೆ. ಭ್ರಷ್ಟಾಚಾರ ಮತ್ತು ದುರುಪಯೋಗಕ್ಕಾಗಿ ಜೈಲಿನಲ್ಲಿರುವ ಸುನ್ನಿ ಕೈದಿಗಳ ಬಿಡುಗಡೆಗೆ ದಾರಿ ಮಾಡಿಕೊಟ್ಟಿತು. ಇದಲ್ಲದೆ, ಭೂ ಕಾನೂನನ್ನು ಸಹ ಅಂಗೀಕರಿಸಲಾಗಿದೆ. ಇದರ ಉದ್ದೇಶವು ಕುರ್ದಿಶ್ ಪ್ರದೇಶಗಳನ್ನು ಕ್ಲೈಮ್ ಮಾಡುವುದು.

ಈ ಕಾನೂನುಗಳನ್ನು ಅಂಗೀಕರಿಸುವ ಪ್ರಕ್ರಿಯೆಯು ವಿವಾದಾಸ್ಪದವಾಗಿತ್ತು. ಸರಿಯಾದ ಮತದಾನವಿಲ್ಲದೆ ಈ ಕಾನೂನುಗಳನ್ನು ಅಂಗೀಕರಿಸಲಾಗಿದೆ ಎಂದು ಸ್ವತಂತ್ರ ಸಂಸದ ನೂರ್ ನಫಿ ಅಲಿ ಹೇಳಿದ್ದಾರೆ. ಇದು ಪ್ರಜಾಪ್ರಭುತ್ವದ ಅಣಕ ಎಂದಿದ್ದಾರೆ. ಈ ವಿವಾದಾತ್ಮಕ ಕಾನೂನುಗಳು ಇರಾಕ್‌ನಲ್ಲಿ ಸಾಮಾಜಿಕ ಮತ್ತು ರಾಜಕೀಯ ಚರ್ಚೆಯನ್ನು ತೀವ್ರಗೊಳಿಸಿವೆ. ಕೆಲವರು ಇದನ್ನು ಇಸ್ಲಾಮಿಕ್ ಮೌಲ್ಯಗಳ ಮರುಸ್ಥಾಪನೆ ಎಂದು ನೋಡುತ್ತಿದ್ದಾರೆ. ಇನ್ನೂ ಅನೇಕರು ಇದನ್ನು ಮಹಿಳೆಯರ ಹಕ್ಕುಗಳು ಮತ್ತು ಸ್ವಾತಂತ್ರ್ಯಕ್ಕೆ ಗಂಭೀರ ಬೆದರಿಕೆ ಎಂದು ಪರಿಗಣಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ, ಈ ಕಾನೂನುಗಳ ಪ್ರಭಾವವು ಇರಾಕ್‌ನ ಸಾಮಾಜಿಕ ರಚನೆಯ ಮೇಲೆ ಆಳವಾದ ಪ್ರಭಾವವನ್ನು ಬೀರಬಹುದು.

Comments are closed.