Noida: ಸ್ಟವ್ ಮೇಲೆ ಚೋಲೆ ಇಟ್ಟು ಮಲಗಿದ್ದ ಇಬ್ಬರು ಉಸಿರುಗಟ್ಟಿ ಸಾವು
Noida: ಬಾಡಿಗೆ ಕೋಣೆಯಲ್ಲಿ ಇಬ್ಬರು ವ್ಯಕ್ತಿಗಳು ಶವವಾಗಿ ಪತ್ತೆಯಾದ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನೋಯ್ಡಾದಲ್ಲಿ ಶನಿವಾರ (ಜ.11) ನಡೆದಿದೆ. ಒಲೆಯ ಮೇಲೆ ಕಡಲೆ ಬೇಯಲು ಇಟ್ಟಿದ್ದರಿಂದ ರಾತ್ರಿಯಿಡೀ ಆ ಜಾಗದಲ್ಲಿ ಹೊಗೆಯಿಂದ ತುಂಬಿ, ಉಸಿರುಗಟ್ಟಿ ಸಾವು ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಉಪೇಂದ್ರ (22), ಶಿವಂ (23) ಇವರಿಬ್ಬರು ಮೃತ ವ್ಯಕ್ತಿಗಳು. ಇವರು ಚೋಲೆ ಕುಲ್ಚೆ ಮತ್ತು ಭಟುರಾ ಮಾರಾಟ ಮಾಡುವ ವ್ಯವಹಾರ ಮಾಡುತ್ತಿದ್ದರು. ಬೆಳಿಗ್ಗೆ ಸಣ್ಣ, ಗಾಳಿಯಿಲ್ಲದ ಕೋಣೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯರು ಬಾಗಿಲು ಬಡಿದು ಒಡೆದು ಒಳಗೆ ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ.
ಇಬ್ಬರೂ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೂಡಲೇ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ವೈದ್ಯರು ಪರಿಶೀಲನೆ ಮಾಡಿದಾಗ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಇವರು ಮಲಗುವ ಮುನ್ನ ಗ್ಯಾಸ್‌ಸ್ಟವ್ ಮೇಲೆ ಚೋಲೆ ಅಡುಗೆ ಪಾತ್ರೆಯನ್ನು ಇಟ್ಟಿದ್ದು, ರಾತ್ರಿಯಿಡೀ ಒಲೆ ಉರಿಯುತ್ತಲೇ ಇತ್ತು. ಇದರಿಂದ ಆಹಾರ ಸುಟ್ಟು ಹೋಗಿದೆ. ಕೂಡಲೇ ಹೊಗೆ ಮನೆತುಂಬಿದೆ. ಸಣ್ಣ ಗಾಳಿಯಾಡದ ಕೋಣೆಯಾಗಿದ್ದರಿಂದ ಗಾಳಿ ಹೊರ ಹೋಗದೆ ಹೊಗೆ ಮತ್ತು ಇಂಗಾಲದ ಮಾನಾಕ್ಸೈಡ್ ಸಂಗ್ರಹವಾಗಿ ಇಬ್ಬರೂ ಕೂಡಾ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ ಎಂದು ತನಿಖೆ ಮೂಲಕ ತಿಳಿದು ಬಂದಿದೆ ಎಂದು ನೋಯ್ಡಾ ಪೊಲೀಸರು ತಿಳಿಸಿದ್ದಾರೆ.
Comments are closed, but trackbacks and pingbacks are open.