Dharmasthala : ಜ. 7ರಂದು ಉಪ ರಾಷ್ಟ್ರಪತಿಗಳಿಂದ ಉದ್ಘಾಟನೆಗೊಳ್ಳಲಿದೆ ದೇವರ ದರ್ಶನಕ್ಕೆ ಭಕ್ತರಿಗಾಗಿ ನಿರ್ಮಿಸಿದ ‘ಶ್ರೀ ಸಾನ್ನಿಧ್ಯ’ !! ಏನಿದರ ವಿಶೇಷತೆ ?
Dharmasthala : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನಕ್ಕಾಗಿ ಸರತಿಯಲ್ಲಿ ನಿಲ್ಲುವ ಭಕ್ತರ ಅನುಕೂಲಕ್ಕಾಗಿ ಶ್ರೀ ಸಾನ್ನಿಧ್ಯ ಎಂಬ ಸಂಕೀರ್ಣವನ್ನು ಹೊಸದಾಗಿ ನಿರ್ಮಿಸಲಾಗಿದ್ದು ಇದರ ಉದ್ಘಾಟನೆಯು ಇದೇ ಜನವರಿ 7ರಂದು ಮಧ್ಯಾಹ್ನ 2 ಗಂಟೆಗೆ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಉದ್ಘಾಟಿಸಲಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ(Dharmasthala) ನಾಡಿನ ಪವಿತ್ರ ಪುಣ್ಯಕ್ಷೇತ್ರಗಳಲ್ಲಿ ಒಂದು. ದಿನನಿತ್ಯವೂ ಸಾವಿರಾರು ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಪುನೀತರಾಗುತ್ತಾರೆ. ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ಹಗಲು- ರಾತ್ರಿ ಎನ್ನದೆ, ಮಳೆ-ಬಿಸಿಲೆನ್ನದೆ ಸರತಿ ಸಾಲಿನಲ್ಲಿ ನಿಂತು ಸ್ವಾಮಿಯನ್ನು ಕಂಡು ಸಂತೋಷ ಪಡುತ್ತಾರೆ. ಹೀಗಾಗಿ ಈ ಭಕ್ತರ ಅನುಕೂಲಕ್ಕಾಗಿ ಕ್ಷೇತ್ರದ ಆಡಳಿತ ಮಂಡಳಿ ಈ ಹೊಸ ಸಂಕೀರ್ಣವನ್ನು ಲೋಕಾರ್ಪಣೆ ಮಾಡುತ್ತಿದೆ. ಉಪರಾಷ್ಟ್ರಪತಿಗಳಿಂದ ಈ ಒಂದು ಭವ್ಯ ಕಟ್ಟಡ ಉದ್ಘಾಟನೆಯಾಗುತ್ತಿರುವುದು ಭಕ್ತಾದಿಗಳೆಲ್ಲರಿಗೂ ಹೆಮ್ಮೆಯ ಸಂಗತಿ.
ಈ ಶ್ರೀ ಸಾನ್ನಿಧ್ಯ ಕಟ್ಟಡದ ವಿಶೇಷತೆ ಏನು?
ಬರೋಬ್ಬರಿ 2.75ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಈ ಸಂಕೀರ್ಣವನ್ನು ನಿರ್ಮಿಸಲಾಗಿದೆ. ದೇವಾಲಯದ ಹಿಂಭಾಗದಲ್ಲಿಯೇ ಈ ಕಟ್ಟಡ ತಲೆಯೆತ್ತಿದೆ. ವೃತ್ತಾಕಾರದಲ್ಲಿದ್ದು ನೋಡುಗರ ಕಣ್ಮನ ಸೆಳೆಯುತ್ತದೆ. ಇದು ಎರಡು ಅಂತಸ್ತು ಹೊಂದಿದ್ದು ಆಧುನಿಕ ತಂತ್ರಜ್ಞಾನ ಬಳಸಿ ಭಕ್ತರ ಅನುಕೂಲಕ್ಕೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇದರಲ್ಲಿರುವ 16 ವಿಶಾಲ ಸಭಾಭವನಗಳಲ್ಲಿ ಭಕ್ತರು ವಿಶ್ರಾಂತಿ ಪಡೆಯಬಹುದಾಗಿದೆ.
ಪ್ರತಿ ಸಭಾಭವನದಲ್ಲಿ 800 ಮಂದಿ ವಿಶ್ರಾಂತಿ ಪಡೆದುಕೊಳ್ಳಲು ಅವಕಾಶವಿದೆ. ಮಕ್ಕಳ ಆರೈಕೆ ಕೊಠಡಿ, ಶೌಚಾಲಯ, ಕ್ಯಾಂಟೀನ್ ಸೌಲಭ್ಯವೂ ಇದೆ. ಸೂಚನಾಫಲಕಗಳು ಹಾಗೂ ಸಿಸಿಟಿವಿ ಕ್ಯಾಮೆರಾಗಳೂ ಇವೆ. ಸಂಕೀರ್ಣದ ಪ್ರವೇಶದ್ವಾರದ ಎದುರು ಧರ್ಮಸ್ಥಳದ ಇತಿಹಾಸ ಮತ್ತು ಪರಂಪರೆಯನ್ನು ಬಿಂಬಿಸುವ ಆಕರ್ಷಕ ಕಲಾಕೃತಿಗಳನ್ನು ಇರಿಸಲಾಗಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.
Comments are closed, but trackbacks and pingbacks are open.