Mangalore: ಮುಲ್ಕಿ; ಪತ್ನಿ ಮೇಲಿನ ದ್ವೇಷ, ಮೂವರು ಮಕ್ಕಳನ್ನು ಬಾವಿಗೆ ದೂಡಿ ಹಾಕಿ ಕೊಂದ ಕೃತ್ಯ; ಆರೋಪಿಗೆ ಮರಣದಂಡನೆ ಶಿಕ್ಷೆ

Mangalore: ಪತ್ನಿ ಮೇಲಿನ ದ್ವೇಷದಿಂದ ತನ್ನ ಮೂವರು ಮಕ್ಕಳನ್ನು ಬಾವಿಗೆ ದೂಡಿ ಕೊಲೆ ಮಾಡಿದ ತಂದೆಗೆ ಇದೀಗ ಮಂಗಳೂರಿನ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮರಣದಂಡನೆ ಶಿಕ್ಷೆಯನ್ನು ನೀಡಿದೆ.

 

ಆರೋಪಿ ಹಿತೇಶ್‌ ಶೆಟ್ಟಿಗಾರ್‌ (36) ಎಂಬಾತನಿಗೆ ಕೋರ್ಟ್‌ ಗಲ್ಲು ಶಿಕ್ಷೆಯನ್ನು ವಿಧಿಸಿದೆ.

ಘಟನೆ ವಿವರ:
ಮುಲ್ಕಿ ಠಾಣೆ ವ್ಯಾಪ್ತಿಯ ತಾಳಿಪಾಡಿ ಗ್ರಾಮದ ಪದ್ಮನೂರು ಎಂಬಲ್ಲಿ ಜೂನ್‌ 23, 2022 ರಂದು ಹಿತೇಶ್‌ ಶೆಟ್ಟಿಗಾರ್‌ ಕುಡಿದು ಬಂದು ಆಗ ತಾನೇ ಶಾಲೆಯಿಂದ ಮನೆಗೆ ಬಂದಿದ್ದ ಮಕ್ಕಳಾದ ರಶ್ಮಿತಾ (13), ಉದಯ ಕುಮಾರ್‌ (11), ದಕ್ಷಿತ್‌ (5) ಮಕ್ಕಳನ್ನು ಬಾವಿಗೆ ದೂಡಿ ಹಾಕಿದ್ದು, ದೊಡ್ಡ ಮಗಳು ರಶ್ಮಿತಾ ಬಾವಿಗೆ ಅಳವಡಿಸಿದ್ದ ಪಂಪನ್ನು ಹಿಡಿದು ನೇತಾಡುತ್ತಿದ್ದಾಗ, ಆ ಪೈಪನ್ನೇ ಕತ್ತಿಯಿಂದ ಕಡಿದಿದ್ದಾನೆ. ಕೂಡಲೇ ಆಕೆ ಕೂಡಾ ನೀರಿಗೆ ಬಿದ್ದು ಸಾವಿಗೀಡಾಗಿದ್ದಾಳೆ.

ನಂತರ ಹೋಟೆಲ್‌ ಕೆಲಸ ಮುಗಿಸಿ ಬಂದ ಪತ್ನಿ ಲಕ್ಷ್ಮೀಯನ್ನು ಕೂಡಾ ಹಿತೇಶ್‌ ಬಾವಿಗೆ ದೂಡಲು ಪ್ರಯತ್ನ ಮಾಡಿದ್ದು, ಆಕೆ ಬೊಬ್ಬೆ ಹೊಡೆದಿದ್ದಾಳೆ. ಕೂಡಲೇ ಆಕೆಯ ಬೊಬ್ಬೆ ಕೇಳಿದ ಹೂವಿನ ವ್ಯಾಪಾರಿ ಬಾವಿಯಿಂದ ರಕ್ಷಣೆ ಮಾಡಿದ್ದಾರೆ. ಈ ಕುರಿತು ಪತ್ನಿ ಲಕ್ಷ್ಮೀ ಮುಲ್ಕಿ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧನ ಮಾಡಿದ್ದಾರೆ.

ಈ ಕೊಲೆ ಕುರಿತು ಮುಲ್ಕಿ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಕುಸುಮಾಧರ್‌ ಅವರು ದೋಷಾರೋಪ ಪಟ್ಟಿಯನ್ನು ಕೋರ್ಟಿಗೆ ಸಲ್ಲಿಕೆ ಮಾಡಿದ್ದರು. ವಕೀಲಾದ ಮೋಹನ್‌ ಕುಮಾರ್‌ ಅವರು ಸರಕಾರದ ಪರವಾಗಿ ವಾದ ಮಂಡಿಸಿದ್ದರು. ಡಿ.31ರಂದು ಶಿಕ್ಷೆ ಘೋಷಣೆ ಮಾಡಿದ್ದು, ಆರೋಪಿಯ ಕೃತ್ಯಕ್ಕೆ ಗಲ್ಲು ಶಿಕ್ಷೆ ನೀಡಿ ಆದೇಶ ನೀಡಿದ್ದಾರೆ.

ಹಿತೇಶ್‌ ಶೆಟ್ಟಿಗಾರ್‌ ಎಳನೀರು ವ್ಯಾಪಾರ ಮಾಡಿಕೊಂಡಿದ್ದು, ಕೆಲಸಕ್ಕೆ ಸರಿಯಾಗಿ ಹೋಗುತ್ತಿರಲಿಲ್ಲ. ಹೀಗಾಗಿ ಮನೆಯ ಜವಾಬ್ದಾರಿಯ ಕುರಿತು ಆತನಿಗೆ ಎಳ್ಳಷ್ಟೂ ಇಷ್ಟವಿರಲಿಲ್ಲ. ಹೆಂಡತಿ ಮಕ್ಕಳನ್ನು ಸಾಕಲು ಕಷ್ಟವಾಗುತ್ತದೆ ಎಂದು ಅವರನ್ನು ಕೊಂದರೆ ತಾನು ಹೇಗೆ ಬೇಕಾದರೂ ಬದುಕಬಹುದು ಎಂದು ಯೋಚಿಸಿ ಕೊಲ್ಲುವ ನಿರ್ಧಾರ ಮಾಡಿದ್ದ. ಈತನ ಪತ್ನಿ ಊರಿನ ಕ್ಯಾಂಟೀನ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಮನೆಗೆ ಬಂದಾಗ ಬೀಡಿ ಕಟ್ಟಿ ತನ್ನ ಮಕ್ಕಳನ್ನು ಹೇಗೋ ಸಾಕುತ್ತಿದ್ದಳು. ಆದರೆ ದುಷ್ಟ ಮನಸ್ಸಿನ ಗಂಡ ತನ್ನ ಮಕ್ಕಳೆಂದು ಕೂಡಾ ನೋಡದೇ ಬಾವಿಗೆ ಮೂವರನ್ನು ದೂಡಿದ್ದಾನೆ ಎಂದು ಸರಕಾರಿ ವಕೀಲ ಬಿ.ಮೋಹನ್‌ ಕುಮಾರ್‌ ವಾದ ಮಾಡಿದ್ದಾರೆ.

ಕೆಲಸಕ್ಕೆಂದು ಹೋಗಿದ್ದ ಲಕ್ಷ್ಮೀ ಮನೆಗೆ ಬಂದಾಗ ಮಕ್ಕಳು ಇರಲಿಲ್ಲ. ಮಕ್ಕಳನ್ನು ಹುಡುಕುವ ನೆಪದಲ್ಲಿ ಆತ ಆಕೆಯನ್ನೂ ಬಾವಿಗೆ ತಳ್ಳಿದ್ದ. ಆದರೆ ಆಕೆ ಬಾವಿಗೆ ಬೀಳುವಾಗ ಗಂಡನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರಿಂದ ಇಬ್ಬರೂ ಬಾವಿಗೆ ಬಿದ್ದಿದ್ದಾರೆ. ಯಾರೋ ಬಾವಿಗೆ ಬಿದ್ದ ಶಬ್ದ ಕೇಳಿ ಎಳನೀರು ವ್ಯಾಪಾರಿ ಮಹಮ್ಮದ್‌ ನಸ್ರುತ್ತುಲ್ಲ ಹಾಗೂ ರಾಘವ ಶೆಟ್ಟಿ ಸ್ಥಳಕ್ಕೆ ಬಂದಿದ್ದು, ಹಗ್ಗ ಇಳಿಸಿ ದಂಪತಿಯನ್ನು ರಕ್ಷಣೆ ಮಾಡಿದ್ದಾರೆ. ಈ ಕುರಿತು ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆʼ ಎಂದು ವಕೀಲರು ಹೇಳಿದ್ದಾರೆ.

ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾದ ಸಂಧ್ಯಾ ಅವರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ 302 ರ ಅಡಿಯಲ್ಲಿ ಮರಣ ದಂಡನೆಯನ್ನು ಹಾಗೂ ಪತ್ನಿಯನ್ನು ಕೊಲ್ಲು ಯತ್ನ ಮಾಡಿದ್ದಕ್ಕೆ ಐಪಿಸಿ ಸೆಕ್ಷನ್‌ 307 ರ ಅಡಿಯಲ್ಲಿ 10 ವರ್ಷ ಕಾರಾಗೃಹ ಶಿಕ್ಷೆಯನ್ನು ಇಂದು (ಮಂಗಳವಾರ) ವಿಧಿಸಿ ಆದೇಶ ಹೊರಡಿಸಿದ್ದಾರೆ. ಹಾಗೆನೇ ಕಾನೂನು ಸೇವೆಗಳ ಪ್ರಾಧಿಕಾರವು ಲಕ್ಷ್ಮೀ ಅವರಿಗೆ ಸೂಕ್ತ ಪರಿಹಾರ ನೀಡಲು ನಿರ್ದೇಶನ ಮಾಡಿದ್ದಾರೆ.

ಈ ಕೊಲೆ ಪ್ರಕರಣದಲ್ಲಿ ಒಟ್ಟು 32 ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಮೂಲ್ಕಿ ಠಾಣೆಯ ಇನ್ಸ್‌ಪೆಕ್ಟರ್‌ ಕುಸುಮಾಧರ್‌ ಕೆ. ಈ ಪ್ರಕರಣದ ತನಿಖೆಯನ್ನು ನಡೆಸಿದ್ದು, ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಕೆ ಮಾಡಿದ್ದರು.

Leave A Reply

Your email address will not be published.