Manmohan Singh: ರಾಜ್ ಘಾಟ್’ನಲ್ಲಿ ನೆರವೇರಲ್ಲ ಸಿಂಗ್ ಅಂತ್ಯಕ್ರಿಯೆ – ಮತ್ತೆಲ್ಲಿ ಗೊತ್ತಾ?
Manmohan Singh: ದೇಶದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ಇಂದು ರಾಜ್ಯ ಹಾಗೂ ದೇಶಾದ್ಯಂತ ಎಲ್ಲಾ ಶಾಲಾ- ಕಾಲೇಜು ಕಚೇರಿಗಳಿಗೆ ರಜೆಯನ್ನು ನೀಡಲಾಗಿತ್ತು. ಅಲ್ಲದೆ ಇಂದು ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆ ನೆರವೇರುವ ಕಾರಣ ಕೇಂದ್ರ ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ರಜೆ ಘೋಷಿಸಲಾಗಿದೆ.
ಇದುವರೆಗೂ ದೊರೆತ ಮಾಹಿತಿ ಪ್ರಕಾರ ಮನಮೋಹನ್ ಸಿಂಗ್( Manmohan Singh) ಅವರ ಅಂತ್ಯಕ್ರಿಯೆ ಶನಿವಾರದಂದು ನಡೆಯಲಿದೆ. ಅವರ ಪಾರ್ಥಿವ ಶರೀರವನ್ನು ಕಾಂಗ್ರೆಸ್ ಪ್ರಧಾನ ಕಚೇರಿಗೆ ತರಲಾಗುವುದು, ಅಲ್ಲಿಂದ ಅಂತಿಮ ಯಾತ್ರೆ ನಡೆಯಲಿದ್ದು ಬಳಿಕ ದೇಶದ ಹಲವು ಪ್ರಧಾನಿಗಳ ಅಂತ್ಯಕ್ರಿಯೆ ನಡೆದ ರಾಜ್ ಘಾಟ್ ಬಳಿಯಲ್ಲೇ ಮನಮೋಹನ್ ಸಿಂಗ್ ಅವರ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಮಾಹಿತಿ ಲಭ್ಯವಾಗಿತ್ತು. ಆದರೆ ಈಗ ಬೇರೆ ಮಾಹಿತಿ ಲಭ್ಯವಾಗಿದೆ.
ಹೌದು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Manmohan Singh Funeral) ಅವರ ಅಂತ್ಯಕ್ರಿಯೆಯು ಶನಿವಾರ 28 ಡಿಸೆಂಬರ್ 2024 ರಂದು ಬೆಳಿಗ್ಗೆ 11:45 ಕ್ಕೆ ನಿಗಮಬೋಧ್ ಘಾಟ್‌ನಲ್ಲಿ ನಡೆಯಲಿದೆ ಇಂದು ಮಾಹಿತಿ ಬಂದಿದೆ. ಅವರ ಪಾರ್ಥಿವ ಶರೀರವನ್ನು ಶನಿವಾರ ಬೆಳಗ್ಗೆ ಪಕ್ಷದ ಪ್ರಧಾನ ಕಚೇರಿಯಲ್ಲಿ ಜನರ ಅಂತಿಮ ದರ್ಶನಕ್ಕಾಗಿ ಇರಿಸಲಾಗುವುದು ಮತ್ತು ನಂತರ ಅವರ ಅಂತಿಮ ಯಾತ್ರೆಯು ಅಲ್ಲಿಂದ ಬೆಳಿಗ್ಗೆ 9.30 ಕ್ಕೆ ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ.
ಇನ್ನು ಮನಮೋಹನ್ ಸಿಂಗ್ ಅವರ ಸ್ಮಾರಕ ನಿರ್ಮಿಸುವಂತೆ ಕಾಂಗ್ರೆಸ್ ಕೇಂದ್ರವನ್ನು ಒತ್ತಾಯಿಸಿದೆ. ಈ ಸಂಬಂಧ ಅವರ ಅಂತ್ಯಕ್ರಿಯೆಯನ್ನು, ಸ್ಮಾರಕವನ್ನು ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪತ್ರ ಬರೆದಿದ್ದಾರೆ.