Thane: ಹನಿಮೂನ್ ವಿಚಾರ; ನವವಿವಾಹಿತ ಅಳಿಯನ ಮೇಲೆ ಆಸಿಡ್ ಎಸೆದ ಮಾವ
Thane: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಹನಿಮೂನ್ ವಿಚಾರಕ್ಕೆ ಸಂಬಂಧಪಟ್ಟಂತೆ ಮಾವ ಅಳಿಯನಿಗೆ ಆಸಿಡ್ ಎಸೆದ ಪರಿಣಾಮ ಗಾಯಗೊಂಡಿರುವ ಘಟನೆಯೊಂದು ನಡೆದಿರುವ ಕುರಿತು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಅಳಿಯ ಇಬಾದ್ ಅತೀಕ್ ಫಾಲ್ಕೆ (29) ಆಸ್ಪತ್ರೆಗೆ ದಾಖಲಾಗಿದ್ದು, ಆರೋಪಿ ಜಾಕಿ ಗುಲಾಮ್ ಮುರ್ತಾಜಾ ಖೋಟಾಲ್ (65) ಪರಾರಿಯಾಗಿದ್ದಾನೆ ಎಂದು ಕಲ್ಯಾಣ್ ಪ್ರದೇಶದ ಬಜಾರಪೇತ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಎಸ್‌ಆರ್ ಗೌಡ್ ತಿಳಿಸಿದ್ದಾರೆ. ಎಫ್ಐಆರ್ ಪ್ರಕಾರ, ಫಾಲ್ಕೆ ಇತ್ತೀಚೆಗೆ ಖೋಟಾಲ್ ಅವರ ಮಗಳನ್ನು ವಿವಾಹವಾಗಿದ್ದು, ತಮ್ಮ ಮಧುಚಂದ್ರಕ್ಕಾಗಿ ಕಾಶ್ಮೀರಕ್ಕೆ ಭೇಟಿ ನೀಡಲು ಬಯಸಿದ್ದರು. ಆದರೆ ಅವರ ಮಾವ ದಂಪತಿಗಳು ವಿದೇಶಕ್ಕೆ ಹೋಗಬೇಕೆಂದು ಬಯಸಿದ್ದರು. ಇದು ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರ ರಾತ್ರಿ ಫಾಲ್ಕೆ ಮನೆಗೆ ಹಿಂದಿರುಗಿ ರಸ್ತೆಯೊಂದರಲ್ಲಿ ತನ್ನ ವಾಹನವನ್ನು ನಿಲ್ಲಿಸಿದ್ದ. ತನ್ನ ಕಾರಿನಲ್ಲಿ ಅವನಿಗಾಗಿ ಕಾಯುತ್ತಿದ್ದ ಖೋಟಾಲ್, ಫಾಲ್ಕೆ ಕಡೆಗೆ ಧಾವಿಸಿ ಅವನ ಮೇಲೆ ಆಸಿಡ್ ಎರಚಿದ್ದು, ಈ ದಾಳಿಯಿಂದ ಅಳಿಯನ ಮುಖ ಮತ್ತು ದೇಹವು ಗಾಯಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಖೋಟಾಲ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 124-1 (ಸ್ವಯಂಪ್ರೇರಿತವಾಗಿ ಆಸಿಡ್ ಬಳಕೆಯಿಂದ ಘೋರವಾದ ಗಾಯವನ್ನು ಉಂಟುಮಾಡುವುದು), 351-3 (ಕ್ರಿಮಿನಲ್ ಬೆದರಿಕೆ) ಮತ್ತು ಇತರ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.