Mangaluru : ಸಾಲ ಹಿಂದಿರುಗಿಸಲಾಗದೆ ಅಂಗವಿಕಲ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ – MCC ಬ್ಯಾಂಕ್ ಮುಖ್ಯಸ್ಥ ಅನಿಲ್ ಲೊಬೊ ಅರೆಸ್ಟ್
Mangaluru : ಸಾಲ ಮರು ಪಾವತಿಸಲಾಗದೆ 47 ವರ್ಷದ ಅಂಗವಿಕಲ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಮಂಗಳೂರಿನಲ್ಲಿ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಮಂಗಳೂರು ಕ್ಯಾಥೋಲಿಕ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ (MCC) ಬ್ಯಾಂಕ್ ಮುಖ್ಯಸ್ಥ ಅನಿಲ್ ಲೊಬೊ ಅವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಮಂಗಳೂರು(Mangaluru) ಹೊರವಲಯದ ಪೆರ್ಮಾಯಿ ಎಂಬಲ್ಲಿ ಉಳಾಯಿ ಬೆಟ್ಟು ನಿವಾಸಿ ಅಂಗ ವೈಕಲ್ಯ ಹೊಂದಿದ ಮನೋಹರ್ ಪಿರೇರಾ (47) ಅವರು ಸಾಲ ಮರುಪಾವತಿ ವಿಚಾರದಲ್ಲಿ ಕಿರುಕುಳ ನೀಡಿದ್ದಾರೆ, ಅನ್ಯಾಯ ಮಾಡಿದ್ದಾರೆ ಎಂದು ಮಂಗಳೂರು ಕಥೋಲಿಕ್ ಕೋ ಆಪರೇಟಿವ್ ಬ್ಯಾಂಕ್ (ಎಂಸಿಸಿ ಬ್ಯಾಂಕ್) ಅಧ್ಯಕ್ಷನ ವಿರುದ್ಧ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮನೋಹರ್ ಆತ್ಮಹತ್ಯೆಗೆ ಸಂಬಂಧಿಸಿ, ಅವರ ಸಹೋದರ ಜೀವನ್ ಪಿರೇರಾ ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹಿನ್ನೆಲೆಯಲ್ಲಿ ಇದೀಗ ಪೊಲೀಸರು ಬ್ಯಾಂಕ್ ಅಧ್ಯಕ್ಷನನ್ನು ಬಂಧಿಸಿದ್ದಾರೆ
ಏನಿದು ಪ್ರಕರಣ?
ಸಂತ್ರಸ್ತ ಪೆರ್ಮಾಯಿಯ ಮನೋಹರ್ ಪಿರೇರಾ ಅವರು ಮಂಗಳೂರು ಕಥೋಲಿಕ್ ಕೋ ಆಪರೇಟಿವ್ ಬ್ಯಾಂಕ್‌ನಿಂದ ಮನೆಗಾಗಿ 15 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಇದರಲ್ಲಿ 9 ಲಕ್ಷ ರೂಪಾಯಿ ಸಾಲ ತೀರಿಸಿದ್ದಾಗಿ ವಿಡಿಯೋ ಹೇಳಿಕೆಯಲ್ಲಿ ಹೇಳಿಕೊಂಡಿರುವ ಮನೋಹರ್ ಪಿರೇರಾ, ಕೋವಿಡ್ ಸಂಕಷ್ಟದ ವೇಳೆ ಸಾಲ ಮರುಪಾವತಿ ಮಾಡಿರಲಿಲ್ಲ. ಎರಡು ವರ್ಷ ಹಿಂದೆ ಮನೆ ಜಪ್ತಿಗೆ ಬಂದಾಗ ಚಾರಿಟಿ ಸಂಸ್ಥೆಯಿಂದ ನೆರವು ಪಡೆದು ಸೆಲ್ಫ್ ಚೆಕ್ ಮೂಲಕ 15 ಲಕ್ಷ ರೂಪಾಯಿ ಪಾವತಿಸಿದ್ದೇನೆ ಎಂದಿದ್ದಾರೆ. ಆದರೆ ಆ ಹಣವನ್ನು ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೋ ದುರ್ಬಳಕೆ ಮಾಡಿಕೊಂಡಿದ್ದಾರೆ. ಈಗ ಮತ್ತೆ ಮನೆ ಜಪ್ತಿ ಮಾಡುವುದಾಗಿ ಬೆದರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ಯಾರಾಲಿಸಿಸ್‌ಗೆ ಒಳಗಾಗಿ ಕಾಲು ಊನಗೊಂಡಿದ್ದ ಮನೋಹರ್ ಕೆಲಸಕ್ಕೆ ಹೋಗುತ್ತಿಲ್ಲ. ಆದಾಯ ಇಲ್ಲದ ಕಾರಣ ಭಾರಿ ಸಂಕಷ್ಟಕ್ಕೆ ಒಳಗಾಗಿದ್ದರು. ಅನಿಲ್ ಲೋಬೋ ಅವರ ಬೆದರಿಕೆಗಳಿಂದ ಮಾನಸಿಕವಾಗಿ ಕುಗ್ಗಿದ್ದರು ಎಂದು ಹೇಳಲಾಗುತ್ತಿದೆ.
ವಿಡಿಯೋದಲ್ಲಿ ಏನಿದೆ?
ವಿಡಿಯೋದಲ್ಲಿ ಮನೋಹರ್ ಅವರು ತುಳು ಭಾಷೆಯಲ್ಲಿ ಮಾತನಾಡಿದ್ದಾರೆ. ಇದರಲ್ಲಿ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೋಗೆ 15 ಲಕ್ಷ ರೂಪಾಯಿ ಸೆಲ್ಫ್ ಚೆಕ್ ಕೊಟ್ಟಿದ್ದೇನೆ. ಅದರಲ್ಲಿ ಒಂಭತ್ತು ಲಕ್ಷ ರೂಪಾಯಿ ಆತ ಬಳಸಿಕೊಂಡಿದ್ದಾನೆ. ಇದರ ಬಗ್ಗೆ ಕೇಳಿದರೆ ಬೆದರಿಕೆ ಹಾಕುತ್ತಿದ್ದು, ನನ್ನ ಮಾನಸಿಕ ನೆಮ್ಮದಿ ಹಾಳಾಗಿದೆ. ಖಿನ್ನತೆಗೆ ಜಾರಿದ್ದೇನೆ. ಇದಕ್ಕೆ ಚಿಕಿತ್ಸೆ ಪಡೆದುಕೊಂಡಿದ್ದೇನೆ. ನಾಲ್ಕು ಸಲ ಆಸ್ಪತ್ರೆಗೆ ದಾಖಲಾದೆ. 7.20 ಲಕ್ಷ ರೂಪಾಯಿ ಬಿಲ್ ಆಗಿತ್ತು. ಸ್ನೇಹಿತರು ಅದನ್ನು ಭರಿಸಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಕೆಲಸಕ್ಕೂ ಹೋಗ್ತಿಲ್ಲ. ಈಗ ನಾನು ಹಾರ್ಟ್ ಪೇಷೆಂಟ್. ಸರ್ಜರಿ ಆಗಿದೆ. ಪಾಸ್‌ಬುಕ್ ವಿವರ ವಾಟ್ಸ್‌ಅಪ್‌ಗೂ ಹಾಕ್ತೇನೆ ನೋಡಿ ಎಂದು ಹೇಳಿಕೊಂಡಿದ್ದಾರೆ.