Bantwala: 50 ಮಂದಿ ಪ್ರವಾಸಿಗರಿದ್ದ ಬಸ್ ಪಲ್ಟಿ, ಹಲವು ಮಂದಿಗೆ ಗಾಯ
Bantwala: ಡಿ.15 (ಇಂದು) ರವಿವಾರ, ಶಂಭೂರಿನ ಶ್ರೀ ಸಾಯಿ ಮಂದಿರದಿಂದ ಹೊರಟ ಪ್ರವಾಸಿಗರ ಬಸ್ ಸಾಗರ ತಾಲೂಕಿನ ಕಾರ್ಗಲ್ ಬಳಿಯ ತಿರುವಿನಲ್ಲಿ ತಾಂತ್ರಿಕ ದೋಷ ಉಂಟಾದ ಪರಿಣಾಮ ಪಲ್ಟಿಯಾಗಿ ಬಸ್ಸಿನಲ್ಲಿದ್ದ 20 ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ನಡೆದಿದೆ.
ಪ್ರವಾಸಿಗರ ತಂಡವಿದ್ದ ಈ ಬಸ್ಸಿನಲ್ಲಿ ಸರಿ ಸುಮಾರು 50 ಮಂದಿ ಇದ್ದರು. ರವಿವಾರ (ಇಂದು) ಮುಂಜಾನೆ 5ರ ಸುಮಾರಿಗೆ ಬಸ್ ಶಂಭೂರಿನಿಂದ ಹೊರಟು ಜೋಗ ಜಲಪಾತಕ್ಕೆ ತೆರಳುವಾಗ ಈ ಘಟನೆ ನಡೆದಿದ್ದು, ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ ಹೊಡೆದಿದೆ. ಶಂಭೂರಿನ ಯಶೋಧ ಹಾಗೂ ದೀಕ್ಷಿತಾ ಅವರಿಗೆ ಈ ಘಟನೆಯಲ್ಲಿ ಗಂಭೀರ ಗಾಯವಾಗಿದೆ. ಬಸ್ಸಿನಲ್ಲಿದ್ದ ಕೆಲವು ಮಂದಿಯ ಕೈ ಕಾಲಿಗೆ ಗಂಭೀರ ಗಾಯವಾಗಿದ್ದು, ಒಂದಿಬ್ಬರು ಮಕ್ಕಳ ತಲೆಗೆ ಗಂಭೀರ ಗಾಯವಾಗಿದೆ ಎಂದು ವರದಿಯಾಗಿದೆ. ಗಾಯಗೊಂಡವರನ್ನು ಸಾಗರ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಕೆಲವೊಬ್ಬರಿಗೆ ಪ್ರಥಮ ಚಿಕಿತ್ಸೆ ನೀಡಿ ಮಂಗಳೂರಿಗೆ ಕರೆ ತರಲಾಗುತ್ತಿರುವ ಕುರಿತು ಬಸ್ಸಿನಲ್ಲಿದ್ದವರು ಹೇಳಿದ್ದಾರೆ.
ಪ್ರವಾಸಿ ಬಸ್ ಮುಂಜಾನೆ 5 ರ ಸುಮಾರಿಗೆ ಶಂಭೂರಿನಿಂದ ಹೊರಟಿದ್ದು ಅಲ್ಲಿಂದ ಪಾಣೆಮಂಗಳೂರು, ಬಿಸಿ ರೋಡು, ಮಂಗಳೂರಿನಲ್ಲಿ ಪ್ರವಾಸಿಗರನ್ನು ಹತ್ತಿಸಿ ದೇವಸ್ಥಾನಕ್ಕೆ ಭೇಟಿ ನೀಡಿ ನಂತರ ಜೋಗ ಜಲಪಾತಕ್ಕೆ ಹೋಗುತ್ತಿತ್ತು.