Uppinangady: ಕಲ್ಲಿನಿಂದ ತಲೆ ಜಜ್ಜಿ ಕಾರ್ಮಿಕನ ಕೊಲೆ!!
Uppinangady: ದಕ್ಷಿಣ ಕನ್ನಡ ಉಪ್ಪಿನಂಗಡಿಯ(Uppinangady ) ಬಸ್ ನಿಲ್ದಾಣದ ಬಳಿ ನಿರ್ಮಾಣ ಹಂತದಲ್ಲಿರುವ ಗ್ರಾ.ಪಂ.ನ ಗ್ರಂಥಾಲಯ ಕಟ್ಟಡದ ಮೇಲೆ ಯುವಕನೋರ್ವನ ಮೃತದೇಹವು ಡಿ. 4ರ ಬೆಳಗ್ಗೆ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಅಸ್ಸಾಂ ರಾಜ್ಯದ ಕರ್ಬಿ ಅಂಗ್ಲಾಂಗ್ ಜಿಲ್ಲೆಯ ಕ್ರಿಶ್ಚಿಯನ್ ಗ್ರಾಮದ ದೀಪಕ್ ಬೆಂಗರ (34) ಕೊಲೆಗೀಡಾದವ. ಈತ ಕೆಲವು ಸಮಯಗಳ ಹಿಂದೆ ಸ್ಥಳೀಯ ಬಾರ್ ಆಯಂಡ್ ರೆಸ್ಟೋರೆಂಟಿನಲ್ಲಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ಹಾಗೂ ಇತ್ತೀಚೆಗೆ ಕಟ್ಟಡ ನಿರ್ಮಾಣ ಕಾರ್ಯ ದಲ್ಲಿ ಕಾರ್ಮಿಕನಾಗಿ ತೊಡಗಿಕೊಂಡಿದ್ದ. ಆದರೆ ಈಗ ಶವವಾಗಿ ಪತ್ತೆಯಾಗಿದ್ದಾನೆ.
ಬಸ್ ನಿಲ್ದಾಣ ಬಳಿಯಿರುವ ಈ ನಿರ್ಮಾಣ ಹಂತದ ಕಟ್ಟಡವು, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಗೆ ಸೇರಿದ್ದಾಗಿದೆ. ಗ್ರಂಥಾಲಯ ನಿರ್ಮಾಣಕ್ಕಾಗಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಮಳೆ ಇದ್ದ ಕಾರಣ ಸೋಮವಾರ, ಮಂಗಳವಾರ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ನಿನ್ನೆ ಕಾರ್ಮಿಕರು ಕೆಲಸಕ್ಕೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ.
ಕಾರ್ಮಿಕರು ಬುಧವಾರ ಮುಂಜಾನೆ ಕಾಮಗಾರಿಯ ಸಲುವಾಗಿ ಕಟ್ಟಡವನ್ನು ಪ್ರವೇಶಿಸಿದಾಗ ಕಟ್ಟಡದ ಮೊದಲ ಮಹಡಿಯಲ್ಲಿ ಮಲಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ತಲೆಯ ಭಾಗವನ್ನು ಕಲ್ಲಿನಂತಹ ಭಾರವಾದ ವಸ್ತುವಿನ ಸಹಾಯದಿಂದ ಜಜ್ಜಿ ಕೊಲೆಗೈದಂತೆ ಕಂಡುಬಂದಿದೆ. ದೇಹದಲ್ಲಿ ಟೀ ಶರ್ಟ್ ಮಾತ್ರ ಇತ್ತು. ಸಧ್ಯ ಘಟನ ಸ್ಥಳಕ್ಕೆ ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ| ಯತೀಶ್ ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜೇಂದ್ರ, ವಿಧಿವಿಜ್ಞಾನ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.