Teacher: ಸರ್ಕಾರದಿಂದ ನೆಚ್ಚಿನ ಶಿಕ್ಷಕರ ಅಮಾನತು – 5 ಕಿ. ಮೀ ಪಾದಯಾತ್ರೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಸ್ಟೂಡೆಂಟ್ಸ್ !!
Teacher: ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಶಿಕ್ಷಕರನ್ನು ( teacher) ಅಮಾನತುಗೊಳಿಸಿದಕ್ಕೆ ಆಕ್ರೋಶಗೊಂಡ ವಿದ್ಯಾರ್ಥಿಗಳು ಸುಮಾರು 5 ಕಿ.ಮೀ ಪಾದಯಾತ್ರೆ ಮಾಡಿ ಸರ್ಕಾರದ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದು, ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಘಟನೆ, ಯಾದಗಿರಿಯ, ಶಹಾಪುರ ತಾಲೂಕಿನ ದೋರನಹಳ್ಳಿ ಹತ್ತಿರದ ಬೇವಿನಹಳ್ಳಿ ಕ್ರಾಸ್ ಬಳಿಯಲ್ಲಿನ ಮೋರಾರ್ಜಿ ವಸತಿ ಶಾಲೆಯಲ್ಲಿ ನಡೆದಿದೆ.
ಹೌದು, ಮೋರಾರ್ಜಿ ವಸತಿ ಶಾಲೆಯ ಇಬ್ಬರು ಶಿಕ್ಷಕರನ್ನು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಕಾರ್ಯನಿರ್ವಾಹಕ ನಿರ್ದೇಶಕರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಇದೀಗ ಶಿಕ್ಷಕರ ಅಮಾನತು ಖಂಡಿಸಿ ವಸತಿ ಶಾಲೆಯ ವಿದ್ಯಾರ್ಥಿಗಳು ಬೇವಿನಹಳ್ಳಿ ಕ್ರಾಸ್ ನಿಂದ ಶಹಾಪುರದ ತಹಶೀಲ್ದಾರ್ ಕಚೇರಿ ವರೆಗೆ ಕಾಲು ನಡಿಗೆಯಲ್ಲಿ ಆಗಮಿಸಿ ಧರಣಿ ನಡೆಸಿದರು. ಈಗ ಕರ್ತವ್ಯ ನಿರ್ವಹಿಸುತ್ತಿರುವ ವಸತಿ ನಿಲಯ ಪ್ರಾಂಶುಪಾಲ ಹಾಗೂ ವಾರ್ಡನ್ ಅವರನ್ನು ತಕ್ಷಣ ಅಮಾನತು ಮಾಡಬೇಕು ಎಂದು ವಿದ್ಯಾರ್ಥಿಗಳು ಅಗ್ರಹಿಸಿದ್ದಾರೆ. ಅಲ್ಲದೇ ಈಗಾಗಲೇ ಅಮಾನತಾಗಿರುವ ಶಿಕ್ಷಕರನ್ನು ಪುನಃ ಕರ್ತವ್ಯಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಕುರಿತು ಶಹಾಪುರ ತಹಶೀಲ್ದಾರ್ ಉಮಾಕಾಂತ್ ಹಳ್ಳೆ ಪ್ರತಿಕ್ರಿಯಿಸಿ, ವಿದ್ಯಾರ್ಥಿಗಳು ಮನವಿ ನೀಡಿದ್ದಾರೆ. ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಮುಖ್ಯವಾಗಿ ಕರ್ತವ್ಯ ಲೋಪ ಆಧಾರದ ಮೇಲೆ ಬೇವಿನಹಳ್ಳಿ ಕ್ರಾಸ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ಶಿವರಾಜ ಬೀರನೂರ, ಹಿಂದಿ ಭಾಷಾ ಶಿಕ್ಷಕ ಮುಬಾರಕ್ ಅವರನ್ನು ಅಮಾನತು ಮಾಡಲಾಗಿದೆ ಎನ್ನಲಾಗಿದೆ.