Siddaganga Mata: ಶಿವಕುಮಾರ ಸ್ವಾಮೀಜಿ ಪುತ್ತಳಿಗೆ ಹಾನಿ – ತ್ರಿವಿಧ ದಾಸೋಹಿಯನ್ನು ಬಿಡದ ಪಾಪಿಗಳು

Siddaganga Mata: ತ್ರಿವಿಧ ದಾಸೋಹಿ ಹಾಗೂ ನಡೆದಾಡುವ ದೇವರೆಂದೇ ಹೆಸರು ಖ್ಯಾತಿ ಪಡೆದಿದ್ದ ತುಮಕೂರಿನ ಸಿದ್ಧಗಂಗಾ ಮಠದ (Siddaganga Mata) ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುತ್ಥಳಿಯನ್ನು ಕಿಡಿಗೇಡಿಗಳು ಹಾನಿ ಮಾಡಿರುವ ಘಟನೆ ನಗರದ ಗಿರಿನಗರ ಪೊಲೀಸ್ ವ್ಯಾಪ್ತಿಯಲ್ಲಿ ನಡೆದಿದೆ.

 

ಇದೀಗ ಸಿದ್ಧಗಂಗಾ ಮಠದ (Siddhaganga Mata) ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುತ್ಥಳಿಯನ್ನು ಹಾನಿ ಮಾಡಿದ ಸಂಬಂಧ ಕರ್ನಾಟಕ ಸುವರ್ಣ ವೀರಶೈವ ಲಿಂಗಾಯತ ಮಹಾಸಭಾ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ಮಂಗಳವಾರ ಬೆಳಿಗ್ಗೆ ಪುತ್ಥಳಿ ಧ್ವಂಸಗೊಂಡಿರುವುದು ಕಂಡು ಬಂದಿತ್ತು.

ರಾತ್ರಿ ವೇಳೆ ಯಾರೋ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿ ಪ್ರತಿಮೆಯನ್ನು ಧ್ವಂಸಗೊಳಿಸಿರುವ ಶಂಕೆ ವ್ಯಕ್ತವಾಗಿದೆ ಎಂದು ಹೇಳಿದ್ದಾರೆ. ಈ ಬೆಳವಣಗೆಗೆ ಲಿಂಗಾಯತ ಸಮುದಾಯ ಮತ್ತು ಸಿದ್ದಗಂಗಾ ಮಠದ ಅನುಯಾಯಿಗಳು ಆಘಾತದಿಂದ ಪ್ರತಿಕ್ರಿಯಿಸಿದ್ದಾರೆ.

ಆರೋಪಿಗಳ ಸುಳಿವಿಗಾಗಿ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕಾನೂನು ಪ್ರಕಾರ ಕ್ರಮಕೈಗೊಳ್ಳುವಂತೆ ಪೊಲೀಸ್ ಆಯುಕ್ತ ಬಿ ದಯಾನಂದ ಅವರಿಗೆ ಸಮುದಾಯದ ಸದಸ್ಯರು ಒತ್ತಾಯಿಸಿದ್ದಾರೆ. ಇದೇ ವೇಳೆ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಆಯುಕ್ತ ಬಿ ದಯಾನಂದ ಭರವಸೆ ನೀಡಿದ್ದು, ಈ ಬಗ್ಗೆ ಗಂಭೀರವಾಗಿ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಘಟನೆ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ಶಾಸಕ ಅರವಿಂದ ಬೆಲ್ಲದ್‌ ಅವರು. ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಜಾತಿ-ಧರ್ಮದ ಭೇದವಿಲ್ಲದೇ ಲಕ್ಷಾಂತರ ಬಡಮಕ್ಕಳಿಗೆ ಅನ್ನ-ಅಕ್ಷರ-ಆಶ್ರಯ ನೀಡಿದ ನಡೆದಾಡುವ ದೇವರ ಮೇಲೂ ಈ ರೀತಿ ಅನ್ಯಾಯ ಮಾಡುತ್ತಾರೋ ಅಂತಹ ಪುಂಡರ ಹೆಡೆಮುರಿ ಕಟ್ಟಬೇಕಿದ್ದ ಸರ್ಕಾರವೇ, ಸಾಧು-ಸಂತರ ಮೇಲೆ ಎಫ್‌ಐಆರ್ ದಾಖಲಿಸುವ ಮೂಲಕ ಈ ಭಯೋತ್ಪಾದಕರಿಗೆ ನೈತಿಕ ಬೆಂಬಲ ನೀಡುವುದು ನಿಲ್ಲಬೇಕು. ಕಾಂಗ್ರೆಸ್ ಸರ್ಕಾರದ ಓಲೈಕೆ, ತುಷ್ಟೀಕರಣ, ವೋಟ್ ಬ್ಯಾಂಕ್ ರಾಜಕಾರಣವೇ ಇಂತಹ ಘಟನೆಗಳು ರಾಜ್ಯದಲ್ಲಿ ಪದೇ ಪದೇ ಮರುಕಳಿಸುತ್ತಿರುವುದಕ್ಕೆ ನೇರ ಕಾರಣ. ಆದ್ದರಿಂದ ಬೆಂಗಳೂರಿನಲ್ಲಿ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಪುತ್ಥಳಿಗೆ ಅಪಮಾನ ಮಾಡಿದ ಸಮಾಜ ಘಾತುಕರನ್ನು ಕೂಡಲೇ ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸುತ್ತೇನೆಂದು ಹೇಳಿದ್ದಾರೆ.

Leave A Reply

Your email address will not be published.