Telangana : ಹುಲಿಯೊಂದಿಗೆ ಹೋರಾಡಿ ಗಂಡನನ್ನು ರಕ್ಷಿಸಿದ ಹೆಂಡತಿ!!

Telangana: ಮಹಿಳೆಯೊಬ್ಬಳು ತನ್ನ ಪ್ರಾಣ ಪಣಕ್ಕಿಟ್ಟು ಹುಲಿ ದಾಳಿಯಿಂದ ತನ್ನ ಪತಿಯನ್ನು ರಕ್ಷಿಸಿದ ಘಟನೆ ತೆಲಂಗಾಣದ ಆಸಿಫಾಬಾದ್​ನ ಸಿರ್ಪುರ (ಟಿ) ಮಂಡಲದ ದುಬ್ಬಗುಡ ಎಂಬ ಗ್ರಾಮದಲ್ಲಿ ನಡೆದಿದೆ. ಮಹಿಳೆಯ ಸಾಹಸ, ಧೈರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ತೆಲಂಗಾಣದ(Telangana) ಆಸಿಫಾಬಾದ್ ನ ಸಿರ್ಪುರ (ಟಿ) ಮಂಡಲದ ದುಬ್ಬಗುಡ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸುಜಾತಾ ಇಂಥದ್ದೊಂದು ಸಾಹಸ ತೋರಿದ ರೈತ ಮಹಿಳೆ. ಇವರ ಪತಿ ಸುರೇಶ್ ಹುಲಿ ದಾಳಿಗೆ ಸಿಲುಕಿದ್ದರು. ಈ ಸಂದರ್ಭದಲ್ಲಿ ಸುಜಾತಾ ತನ್ನ ಪ್ರಾಣವನ್ನು ಲೆಕ್ಕಿಸದೇ ಹೋರಾಡಿ ಆತನ ಪ್ರಾಣ ಉಳಿಸಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?
ಶನಿವಾರ ಬೆಳಗ್ಗೆ ಸುಜಾತಾ ತಮ್ಮ ಹೊಲದಲ್ಲಿ ಹತ್ತಿ ಬಿಡಿಸುತ್ತಿದ್ದರು. ಹುಲಿ ಅವಿತುಕೊಂಡಿರುವುದನ್ನು ಅರಿಯದ ಪತಿ ಸುರೇಶ್ ಎತ್ತಿನ ಗಾಡಿಯೊಂದಿಗೆ ಬರುತ್ತಿದ್ದರು. ಹತ್ತಿರ ಬರುತ್ತಿದ್ದಂತೆಯೇ ಹುಲಿ ಮೇಲೆರಗಿದೆ. ಕುತ್ತಿಗೆಗೆ ಪರಚಿದೆ. ಸ್ವಲ್ಪ ದೂರದಲ್ಲಿದ್ದ ಸುಜಾತಾ ಓಡಿ ಬಂದು ಪಕ್ಕದಲ್ಲಿ ಬಿದ್ದಿದ್ದ ಕಲ್ಲು ಮತ್ತು ಕೋಲು ಹಿಡಿದು ಜೋರಾಗಿ ಕೂಗುತ್ತಾ ಹುಲಿಯನ್ನು ಹಿಮ್ಮೆಟ್ಟಿಸಿದ್ದಾರೆ. ಹುಲಿ ಉಗುರುಗಳಿಂದ ಪರಚಿದ್ದರಿಂದ ಸುರೇಶ್ ಅವರ ಎದೆಗೆ ಗಾಯವಾಗಿದೆ. ನೆರೆಹೊರೆ ರೈತರ ನೆರವಿನಿಂದ ಸುಜಾತಾ ತನ್ನ ಪತಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇನ್ನು ಈ ವೇಳೆ ಮಾತನಡಿರುವ ಮಹಿಳೆ ಸುಜಾತಾ, ಹುಲಿ ದಾಳಿ ಮಾಡಿದಾಗ ನನಗೆ ನನ್ನ ಪತಿ ಪ್ರಾಣ ಉಳಿಸುವುದಷ್ಟೇ ಯೋಚನೆಯಾಗಿತ್ತು. ನಾನು ಸ್ವಲ್ಪ ಹಿಂಜರಿದಿದ್ದರೂ ಪತಿಯನ್ನು ಕಳೆದುಕೊಳ್ಳುತ್ತಿದ್ದೆ. ಅರೆಕ್ಷಣ ಯೋಚಿಸದೇ ಅವರನ್ನು ರಕ್ಷಿಸಿಕೊಳ್ಳಲು ಹೋರಾಡಿದ್ದಾಗಿ ತಿಳಿಸಿದ್ದಾರೆ. ಮಹಿಳೆಯ ಧೈರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

Leave A Reply

Your email address will not be published.