Mangalore: ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಹೊಡೆದಾಟ
Mangaluru: ನಗರದ ಮಲ್ಲಿಕಟ್ಟೆಯ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹೊಡೆದಾಟವಾಗಿದೆ. ಪಕ್ಷದ ಮುಖಂಡರೇ ಹೊಡೆದಾಟ ಮಾಡಿದ್ದಾರೆ ಎನ್ನಲಾಗಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರು ಪಕ್ಷದ ಹಿರಿಯ ಮುಖಂಡ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನುವ ಕುರಿತು ಆರೋಪವಿದೆ.
ಪಕ್ಷದ ಕಚೇರಿಯಲ್ಲಿ ಗ್ರಾಪಂ ಉಪಚುನಾವಣೆಯಲ್ಲಿ ಗೆದ್ದ 24 ಕಾಂಗ್ರೆಸ್ ಮುಖಂಡರಿಗೆ ಸನ್ಮಾನ ಕಾರ್ಯಕ್ರಮವಿತ್ತು. ಈ ಸಂದರ್ಭದಲ್ಲಿ ಕೆಲವು ನಾಯಕರು ಅರ್ಜೆಂಟ್ ಹೋಗಲಿಕ್ಕುಂಟು, ಕಾರ್ಯಕ್ರಮ ಬೇಗ ಮುಗಿಸಬೇಕು ಎಂದು ಹೇಳುತ್ತಿದ್ದರು ಎನ್ನಲಾಗಿದೆ. ಇದಕ್ಕೆ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ನಿಂತುಕೊಂಡಿದ್ದಲ್ಲಿಗೇ ಕೊರಳಿಗೆ ಹಾರ ಹಾಕಿ ಸನ್ಮಾನಿಸಲು ಮುಂದಾಗಿದ್ದರು. ಇದಕ್ಕೆ ಜಿಪಂ ಸದಸ್ಯ ಪ್ರಕಾಶ್ ಶೆಟ್ಟಿ ನಿಂತುಕೊಂಡಿದ್ದಲ್ಲಿಗೇ ಹೋಗಿ ಸನ್ಮಾನ ಮಾಡುವುದು ಸರಿಯಲ್ಲ. ಅವರನ್ನು ಕುಳ್ಳಿರಿಸಿ ಸನ್ಮಾನ ಮಾಡಲು ಒತ್ತಾಯ ಮಾಡಿದ್ದಾರೆ. ಕುರ್ಚಿಗಳನ್ನು ತಂದಿರಿಸಿದ್ದು, ಇದು ಹರೀಶ್ ಕುಮಾರ್ ಅವರನ್ನು ಕೋಪಗೊಳ್ಳುವಂತೆ ಮಾಡಲಾಗಿದ್ದು, ನಂತರ ಮಾತಿನ ಚಕಮಕಿ ನಡೆದಿದೆ.
ಚಂದ್ರಪ್ರಕಾಶ್ ಶೆಟ್ಟಿ ಮೇಲೆ ಹರೀಶ್ ಕುಮಾರ್ ಕೈ ಮಾಡಿದ್ದು, ಕೆನ್ನೆಗೆ ಹೊಡೆದಿದ್ದಾರೆಂದು ಅಲ್ಲಿ ಸ್ಥಳದಲ್ಲಿ ಇದ್ದವರು ಹೇಳಿದ್ದಾರೆ ಎಂದು ವರದಿಯಾಗಿದೆ. ಇದರಿಂದ ಪ್ರಕಾಶ್ ಶೆಟ್ಟಿ ಪ್ರತಿದಾಳಿ ಮಾಡಲು ಮುಂದಾಗಿದ್ದು, ಮಿಥುನ್ ರೈ ಮತ್ತಿತರರು ಹಿಡಿದು ನಿಲ್ಲಿಸಿದ್ದಾರೆ. ಎರಡೂ ಕಡೆಯ ಬಣದ ಸದಸ್ಯರು ಗಲಾಟೆ ಮಾಡಿದ್ದಾರೆ.
ಅನಂತರ ಕಚೇರಿಯಿಂದ ಹೊರಬಂದ ಪ್ರಕಾಶ್ ಶೆಟ್ಟಿ ಹಲ್ಲೆ ಆದ ಕುರಿತು ಮಾಧ್ಯಮಕ್ಕೆ ಹೇಳಿಕೆ ನೀಡಲಿಲ್ಲ. ಹಲ್ಲೆ ಆಗಿಲ್ಲ, ಜಿಲ್ಲಾಧ್ಯಕ್ಷರ ಕುರಿತು ಹೇಳಿದ್ದಕ್ಕೆ ಬದಲಾವಣೆ ಮಾಡಬೇಕೆಂಬ ಒತ್ತಾಯ ಇದೆ. ಇದನ್ನು ಕೆಪಿಸಿಸಿ ಅಧ್ಯಕ್ಷರು ನಿರ್ಧಾರ ಮಾಡುತ್ತಾರೆ ಎಂದಷ್ಟೇ ಹೇಳಿದ್ದಾರೆ.
ನಂತರ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಅವರಲ್ಲಿ ಮಾಧ್ಯಮದವರು ಪ್ರಶ್ನೆ ಮಾಡಿದಾಗ, ಪಕ್ಷದ ಕಾರ್ಯಕರ್ತರ ಒಳಗೆ ಅಸಮಾಧಾನ ಉಂಟಾಗಿದ್ದು ಅದನ್ನು ಬಗೆಹರಿಸಿಕೊಂಡಿದ್ದೇವೆ. ಅಹಿತಕರ ಘಟನೆ ಆಗಿಲ್ಲ ಎಂದು ಹೇಳಿದ್ದಾರೆ.