Mohan Bhagawat: ಈ ಒಂದು ಕಾರಣಕ್ಕೆ ಪ್ರತಿ ದಂಪತಿ ಕನಿಷ್ಠ 3 ಮಕ್ಕಳನ್ನು ಹೊಂದಬೇಕು- RSS ಮುಖ್ಯಸ್ಥ ಮೋಹನ್ ಭಾಗವತ್ ಅಚ್ಚರಿ ಹೇಳಿಕೆ
Mohan Bhagawat: ಒಂದು ಸಮುದಾಯದ ದಂಪತಿ ಕನಿಷ್ಠ ಮೂವರು ಮಕ್ಕಳನ್ನು ಹೊಂದಬೇಕು’ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ. ಅದಕ್ಕೆ ಅವರು ಕಾರಣವನ್ನೂ ನೀಡಿದ್ದಾರೆ.
ಹೌದು, ನಾಗಪುರದಲ್ಲಿ ನಡೆದ ಕಥಲೆ ಕುಲ ಸಮ್ಮೇಳನದಲ್ಲಿ ಜನಸಂಖ್ಯೆ ಕುಸಿತದ ಬಗ್ಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಆತಂಕ ವ್ಯಕ್ತಪಡಿಸಿದ್ದಾರೆ. ಒಂದು ಸಮುದಾಯದ ಜನಸಂಖ್ಯೆಯು ಶೇ 2.1 ಕ್ಕಿಂತ ಕಡಿಮೆಯಾದರೆ ಅಂತಹ ಸಮಾಜವು ಅಳಿವಿನಂಚಿಗೆ ಹೋಗುತ್ತದೆ. ಹಾಗಾಗಿ ನಾವು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯಬೇಕು. ಸಮಾಜದ ಉಳಿವಿಗೆ ಇದು ಅಗತ್ಯವಾಗಿದೆ ಎಂದು ಹೇಳಿದ್ದಾರೆ.
ಜನಸಂಖ್ಯೆಯು 2.1 ಜನನ ಪ್ರಮಾಣಕ್ಕಿಂತ ಕಡಿಮೆ ಇರಬಾರದು. ಭಾರತದ ಜನಸಂಖ್ಯಾ ನೀತಿಯನ್ನು 1998 ಅಥವಾ 2002 ರಲ್ಲಿ ನಿರ್ಧರಿಸಲಾಯಿತು. ಯಾವುದೇ ಸಮಾಜದ ಜನಸಂಖ್ಯೆಯು 2.1 ಕ್ಕಿಂತ ಕಡಿಮೆಯಾಗಬಾರದು ಎಂದು ಅದರಲ್ಲಿ ಹೇಳಲಾಗಿದೆ. ಹಾಗಾಗಿ ಸಮಾಜವು ಉಳಿಯಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಅಲ್ಲದೆ ತಮ್ಮ ಹೇಳಿಕೆಗೆ ಪೂರಕವಾಗಿ ಜನಸಂಖ್ಯಾ ಶಾಸ್ತ್ರೀಯ ಅಧ್ಯಯನ ಉಲ್ಲೇಖಿಸಿದ ಭಾಗವತ್, ಭಾರತದ ಒಟ್ಟು ಫಲವತ್ತತೆ ದರ ಅಂದರೆ ಮಹಿಳೆ ತನ್ನ ಜೀವಿತಾವಧಿಯಲ್ಲಿ ಜನ್ಮ ನೀಡುವ ಮಕ್ಕಳ ಸರಾಸರಿ ಸಂಖ್ಯೆ ಕನಿಷ್ಠ ಮೂರು ಆಗಿರಬೇಕು. ಜನಸಂಖ್ಯಾ ಶಾಸ್ತ್ರವೂ ಇದನ್ನೇ ಪ್ರತಿಪಾದಿಸುತ್ತದೆ. ಈ ಸಂಖ್ಯೆ ಬಹಳ ಮುಖ್ಯವಾಗಿದೆ ಎಂದು ಹೇಳಿದ್ದಾರೆ.