Mangaluru : ಮಂಗಳೂರು ಪೊಲೀಸ್ ಕಮಿಷನರ್ ವರ್ಗಾವಣೆಗೆ ಒತ್ತಾಯಿಸಿ ಸರಣಿ ಪ್ರತಿಭಟನೆ – ಏನು ಕಾರಣ?
Mangaluru: ಜನಪರ ಪ್ರತಿಭಟನೆ ನಿರಾಕರಿಸುವ, ಪ್ರತಿಭಟನಾಕಾರರ ಮೇಲೆ ಸರಣಿ ಮೊಕದ್ದಮೆ ಹಾಕುವ, ಸರ್ವಾಧಿಕಾರಿ ಧೋರಣೆಯ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ ವಾಲ್ ಮೇಲೆ ಶಿಸ್ತು ಕ್ರಮ ಜರುಗಿಸಲು, ಮಂಗಳೂರು ನಗರ ಕಮೀಷನರೇಟ್ ನಿಂದ ವರ್ಗಾಯಿಸಲು ಒತ್ತಾಯಿಸಿ ಹೋರಾಟ ತೀವ್ರಗೊಳಿಸಲು, ಸರಣಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ತೀರ್ಮಾನಿಸಿದೆ. ಅಂತೆಯೇ ಡಿವೈಎಫ್‌ಐ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ಗುರುವಾರ ನಗರದ ಸ್ಟೇಟ್‌ಬ್ಯಾಂಕ್ (Mangaluru) ಸಮೀಪದ ರಾವ್ ಆಯಂಡ್ ರಾವ್ ಸರ್ಕಲ್ ಬಳಿ ಪ್ರತಿಭಟನೆ ನಡೆಯಿತು.
ಮಾಹಿತಿ ಪ್ರಕಾರ ಹದಗೆಟ್ಟ ರಸ್ತೆಯನ್ನು ದುರಸ್ತಿಗೊಳಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ ಸಿಪಿಎಂ ದ.ಕ.ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಅವರ ವಿರುದ್ಧ ದಾಖಲಿಸಿದ ಪ್ರಕರಣವನ್ನು ಕೈ ಬಿಡಬೇಕು ಮತ್ತು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರನ್ನು ವರ್ಗಾವಣೆಗೊಳಿಸಬೇಕು ಎಂದು ಪ್ರತಿಭಟನೆಕಾರರು ಆಗ್ರಹಿಸಿದ್ದಾರೆ.
ಅಲ್ಲದೆ ಪೊಲೀಸ್ ಆಯುಕ್ತರು ಮತ್ತು ರಾಜ್ಯ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನೆಕಾರರು, ಪೊಲೀಸರು ಸಂಘಿಗಳಂತೆ ವರ್ತಿಸಬಾರದು, ಕೇಸುಗಳ ಮೇಲೆ ಕೇಸು ಹಾಕಿದರೂ ನಾವು ಹೆದರುವುದಿಲ್ಲ, ತಾಕತ್ತಿದ್ದರೆ ನಮ್ಮನ್ನು ಬಂಧಿಸಿ ಎಂದು ಸವಾಲು ಹಾಕಿದ್ದಾರೆ .
ಇನ್ನು ಸುದ್ದಿಗಾರರ ಜೊತೆ ಮಾತನಾಡಿದ ಡಿವೈಎಫ್‌ಐ ದ.ಕ. ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಪೊಲೀಸ್ ಕಮಿಷನರ್ ಮೇಲೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ದ.ಕ.ಜಿಲ್ಲೆಗೆ ಆಗಮಿಸುವ ಮುಖ್ಯಮಂತ್ರಿಗೆ ಕಪ್ಪುಬಾವುಟ ಪ್ರದರ್ಶನ ಮಾಡಲಾಗು ವುದು ಎಂದು ಎಚ್ಚರಿಸಿದರು. ಒಟ್ಟಿನಲ್ಲಿ ಜೂಜು, ಮಟ್ಕಾ ಹಾವಳಿಯಿಂದ ಮಂಗಳೂರು ನಗರ ತತ್ತರಿಸಿದೆ. ಕಮಿಷನರ್ ಮಂಗಳೂರಿನಿಂದ ನಿರ್ಗಮಿಸದಿದ್ದಲ್ಲಿ ನೆಮ್ಮದಿ ಸಾಧ್ಯ ವಿಲ್ಲ ಎಂದು ಸಿಪಿಎಂ ಹೇಳಿಕೆಯಲ್ಲಿ ತಿಳಿಸಿದೆ.