KPCC ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ತಮ್ಮ ಡಿ ಕೆ ಸುರೇಶ್ ಆಯ್ಕೆ?

KPCC: ರಾಜ್ಯದಲ್ಲಿ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ ಬಳಿಕ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಮಾತು ಮುನ್ನಡೆಗೆ ಬಂದಿದೆ. ಹೌದು ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ 5 ವರ್ಷಗಳಿಗೂ ಹೆಚ್ಚು ಕಾಲ ಅಧಿಕಾರ ನಿರ್ವಹಿಸಿದ್ದಾರೆ ಹೀಗಾಗಿ ಅಧ್ಯಕ್ಷರ ಪಟ್ಟವನ್ನು ಬೇರೆಯವರಿಗೆ ಬಿಟ್ಟು ಕೊಡಬೇಕೆಂಬ ವಿಚಾರ ಕಾಂಗ್ರೆಸ್ ವಲಯದಲ್ಲಿ ಸುಳಿದಾಡುತ್ತಿದೆ.
ಕೆಪಿಸಿಸಿ(KPCC) ಅಧ್ಯಕ್ಷರ ಬದಲಾವಣೆಯ ಗಾಳಿ ಬೀಸಿದಾಗ ಹಲವಾರು ಆಕಾಂಕ್ಷಿಗಳು ಈ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಈ ಒಂದು ಪಟ್ಟ ಅತಿ ಮುಖ್ಯವಾಗಿರುವಂತೆ ಕಾಣುತ್ತಿದೆ. ಆದರೆ ಡಿಕೆ ಶಿವಕುಮಾರ್ ಅವರು ತಾನು ಪಟ್ಟದಿಂದ ಇಳಿಯುವ ಕುರಿತು ಎಲ್ಲಿಯೂ ಮಾತನಾಡಿಲ್ಲ ಒಂದು ವೇಳೆ ಇಳಿದರೆ ಈ ಪಟ್ಟ ಯಾರ ಪಾಲಾಗಬಹುದು ಎಂಬುದು ಕುತೂಹಲದ ಸಂಗತಿಯಾಗಿದೆ. ಇದರ ನಡುವೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೂತನ ಸಾರಥಿ ಆಯ್ಕೆಯಾಗಿದ್ದಾರೆ ಎನ್ನುವ ಗುಸುಗುಸು ಕೂಡ ಶುರುವಾಗಿದೆ.
ಹೌದು, ಸದ್ಯ ಡಿಸಿಎಂ ಡಿ.ಕೆ.ಶಿವಕುಮಾರ್(DK Shivkumar )ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ತಮ್ಮದೇ ಹವಾ ಕ್ರಿಯೇಟ್ ಮಾಡಿಕೊಂಡು ಬಂದಿದ್ದಾರೆ. ಮುಂದಿನ ಸಿಎಂ ಸ್ಥಾನದ ಬಗ್ಗೆಯೂ ಅವರು ನಿಗಾ ಇಟ್ಟಿರುವುದರಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಆದರೆ, ತಮ್ಮ ನಂತರ ಈ ಕೆಪಿಸಿಸಿ ಅಧಿಕಾರ ಬೇರೆಯವರಿಗೆ ಹೋದರೆ ಸಮಸ್ಯೆಯಾಗಬಹುದು ಎಂದು ಅವಲೋಕಿಸಿ, ತನ್ನ ಸಹೋದರ ಡಿ.ಕೆ.ಸುರೇಶ್(D K Suresh)ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವುದು ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕಾಂಗ್ರೆಸ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೂಡ ಭಾರಿ ಮಹತ್ವದ ಕುರ್ಚಿ ಆಗಿರುವುದರಿಂದ ಇದು ಕೈತಪ್ಪಿದರೆ ಮುಂದಿನ ರಾಜಕೀಯ ಹಾದಿಗೆ ಕಷ್ಟವಾಗಬಹುದು ಎಂದೂ ಡಿ.ಕೆ.ಶಿವಕುಮಾರ್ ಲೆಕ್ಕಚಾರ ಹಾಕಿದ್ದಾರೆ ಎನ್ನಲಾಗಿದೆ. ಹಾಗಾಗಿ ತಮ್ಮ ಸಹೋದರ ಡಿ.ಕೆ.ಸುರೇಶ್ ಅವರಿಗೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟರೆ, ಒಂದು ರೀತಿಯಲ್ಲಿ ಕೆಪಿಸಿಸಿ ತಮ್ಮ ಸುಪರ್ದಿಯಲ್ಲೇ ಇರುತ್ತದೆ ಎಂದು ಡಿಕೆಶಿ ಪ್ಲ್ಯಾನ್ ಮಾಡಿದ್ದಾರೆ. ಈ ಸಂಬಂಧ ದೆಹಲಿ ನಾಯಕರೊಂದಿಗೆ ಚರ್ಚೆ ಕೂಡ ನಡೆದಿದೆ ಎಂದು ಕಾಂಗ್ರೆಸ್ ವಲಯದಲ್ಲಿ ಚರ್ಚೆಗಳು ಜೋರಾಗಿವೆ