Podi: ರೈತರೇ ಗಮನಿಸಿ – ಜಮೀನು ಪೋಡಿ ಮಾಡಿಸಲು ಇನ್ನು ಈ ಮೂರು ದಾಖಲೆಗಳಿದ್ದರೆ ಸಾಕು, ಕಂದಾಯ ಇಲಾಖೆಯಿಂದ ಮಹತ್ವದ ಆದೇಶ!!
Podi: ರೈತರಿಗೆ ಹಾಗೂ ಜನಸಾಮಾನ್ಯರಿಗೆ ಅನುಕೂಲವಾಗಲೆಂದು ಪೋಡಿ(Podi) ಮಾಡಿಸುವ ಕುರಿತು ಸರ್ಕಾರ ಹೊಸ ನಿಯಮ ಒಂದನ್ನು ಜಾರಿಗೆ ತಂದಿದೆ. ಈ ನಿಯಮದ ಪ್ರಕಾರ ನಿಮ್ಮ ಬಳಿ ಕನಿಷ್ಠ ಮೂರು ದಾಖಲಾತಿಗಳು ಲಭ್ಯವಿದ್ದರೂ ರೈತರಿಗೆ ಮಂಜೂರಾಗಿರುವ ಜಮೀನುಗಳ ಪೋಡಿ ಕಾರ್ಯ ಪೂರ್ಣಗೊಳಿಸಬಹುದು.
ಹೌದು, ಇನ್ನು ಮುಂದೆ ಕನಿಷ್ಠ ದಾಖಲೆಗಳ ಆಧಾರದಲ್ಲಿ ಆಯಾ ತಹಶೀಲ್ದಾರ್ ಅವರು, ದಾಖಲೆಗಳ ನೈಜತೆಯನ್ನು ಪರಿಶೀಲಿಸಿ, ಪೋಡಿ ಮಾಡಲು ಆದೇಶಿಸಬಹುದಾಗಿದೆ. ಈ ಕುರಿತು ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
ಅಂದಹಾಗೆ ಮೊದಲು ಯಾವುದೇ ಒಂದು ದಾಖಲಾತಿ ಲಭ್ಯವಿಲ್ಲದಿದ್ದರೂ ಆ ಕಡತವನ್ನು ‘ಗೈರುವಿಲೇ ಸಮಿತಿ’ ಮುಂದೆ ಮಂಡಿಸಬೇಕಿತ್ತು. ಈ ಪ್ರಕ್ರಿಯೆ ಸುದೀರ್ಘ ಅವಧಿ ತೆಗೆದುಕೊಳ್ಳುತ್ತಿದ್ದ ಕಾರಣ ಪೋಡಿ ಕಾರ್ಯಗಳು ಸಾಕಷ್ಟು ವಿಳಂಬವಾಗುತ್ತಿದ್ದವು. ಪೋಡಿ ದುರಸ್ತಿಗಾಗಿ ನಮೂನೆ 1ರಿಂದ 5 ಮತ್ತು 6ರಿಂದ 10ರವರೆಗಿನ ಭೂ ದಾಖಲೆಗಳನ್ನು ಹಾಜರುಪಡಿಸುವುದು ಕಡ್ಡಾಯವಾಗಿತ್ತು. ದಶಕಗಳ ಹಿಂದೆಯೇ ಸರ್ಕಾರ ಬಡ ರೈತರಿಗೆ ಜಮೀನು ಮಂಜೂರು ಮಾಡಿದ್ದರೂ, ಸಮರ್ಪಕ ದಾಖಲೆಗಳ ಕೊರತೆಯ ಕಾರಣ ಜಮೀನು ಪೋಡಿ ಆಗಿರಲಿಲ್ಲ. ರೈತರು ಇಂದಿಗೂ ಸರ್ಕಾರಿ ಕಚೇರಿಗಳಿಗೆ ಸುತ್ತುತ್ತಿದ್ದಾರೆ.
ಈಗ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲಾಗಿದ್ದು, ಒಂದು ಸರ್ವೆ ನಂಬರಿನ ಎಲ್ಲ ಮಂಜೂರಾತಿಯ ನಮೂನೆ 1ರಿಂದ 5 ಮತ್ತು ಪೋಡಿ ಕೆಲಸವನ್ನು ಏಕಕಾಲದಲ್ಲಿ ನಿರ್ವಹಿಸಲಾಗುತ್ತದೆ. ಎಲ್ಲ ದಾಖಲೆಗಳನ್ನೂ ಸ್ಕ್ಯಾನ್ ಮಾಡಿ, ಅಳವಡಿಸಲಾಗುತ್ತಿದೆ. ಒಂದು ಸರ್ವೆ ನಂಬರಿಗೆ ಒಮ್ಮೆ ದಾಖಲೆಗಳನ್ನು ಅಳವಡಿಸಿದ ನಂತರ ಅವು ಕಾಯಂ ಆಗಿ ಲಭ್ಯವಾಗುತ್ತವೆ. ದರಖಾಸ್ತು ಪೋಡಿ ಪ್ರಕ್ರಿಯೆಯಲ್ಲಿ ಅಕ್ರಮಗಳನ್ನು ತಡೆಯುವ ಸಲುವಾಗಿ ಗ್ರಾಮ ಆಡಳಿತ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಶಿರಸ್ತೇದಾರರು ಹಾಗೂ ತಹಶೀಲ್ದಾರರು ನಮೂನೆ 1ರಿಂದ 5ರ ಮಾಹಿತಿಯನ್ನು ಭರ್ತಿ ಮಾಡಿ, ಡಿಜಿಟಲ್ ಸಹಿ ಮಾಡುವಂತಹ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಈ ಮೂಲಕ ಅಕ್ರಮಗಳಿಗೆ ಕಡಿವಾಣ ಹಾಕಲಾಗುತ್ತಿದೆ.
ಪೋಡಿ ಎಂದರೇನು?: ಪೋಡಿ ಎಂದರೆ ಜಮೀನಿನ ಭಾಗ ಮಾಡುವುದು ಎಂದರ್ಥ. ಅಂದರೆ ಒಂದೇ ಸರ್ವೇ ನಂಬರಿನಲ್ಲಿ ಒಬ್ಬರಿಗಿಂತ ಹೆಚ್ಚು ಜನರ ಹೆಸರಿದ್ದರೆ ಅದನ್ನು ಪ್ರತ್ಯೇಕವಾಗಿ ಎಲ್ಲಾ ಸದಸ್ಯರ ಹೆಸರಿನ ಮೇಲೆ ಸರ್ವೇ ನಂಬರ್ ಮಾಡುವುದನ್ನೇ ಪೋಡಿ ಎಂದು ಕರೆಯುವರು.
ಜಮೀನಿನ ಪೋಡಿ ನಕ್ಷೆ ಅಗತ್ಯ ಏಕೆ? : ಕುಟುಂಬದ ಸದಸ್ಯರ ಪಾಲುಗಾರಿಕೆ, ಭೂ ಆಸ್ತಿಯ ಕೆಲವು ಭಾಗ ಮಾರಾಟ, ದಾನಪತ್ರ, ನಿವೇಶನಕ್ಕೆ ಬಳಕೆ, ಭೂ ಪರಿವರ್ತನೆ ಹೀಗೆ ಹಲವಾರು ಚಟುವಟಿಕೆಗಳಿಗೆ ಪೋಡಿ ನಕ್ಷೆ ತುಂಬಾ ಅವಶ್ಯಕವಾಗಿದೆ. ಒಂದು ಸರ್ವೇ ನಂಬರಿನಲ್ಲಿ ಹಲವರ ಹೆಸರಿದ್ದರೆ ಮುಂದೆ ಸರ್ಕಾರದಿಂದ ಸೌಲಭ್ಯ ಪಡೆಯುವುದಕ್ಕೆ ತೊಂದರಯಾಗುತ್ತದೆ. ಬ್ಯಾಂಕಿನಲ್ಲಿ ಸಾಲ ಸೌಲಭ್ಯವೂ ಸಿಗುವುದಿಲ್ಲ. ಜಮೀನು ಮಾರಾಟ ಸಂದರ್ಭದಲ್ಲಿಯೂ ತೊಡಕಾಗುವ ಸಾಧ್ಯತೆ ಇರುತ್ತದೆ. ಪೋಡಿ ನಕ್ಷೆ ಮಾಡಿಸುವುದಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವುದಕ್ಕಾಗಿ ಸರ್ಕಾರವು ಈಗ ಆನ್ಲೈನ್ ವ್ಯವಸ್ಥೆಯನ್ನು ಮಾಡಿದೆ. ರೈತರು ಸ್ವತಃ ಅವರೆ ಮೊಬೈಲ್ ನಲ್ಲಿ ಜಮೀನಿನ ಪೋಡಿ ನಕ್ಷೆ ತಯಾರಿಸಿಕೊಳ್ಳಬಹುದು. ಸಹೋದರರು, ಸಂಬಂಧಿಕರು ಮನೆಯಲ್ಲಿಯೇ ಕುಳಿತು ತಮ್ಮ ಜಮೀನಿನ ಭಾಗ ಮಾಡಿಕೊಳ್ಳಲು ಇದು ಅವಕಾಶ ಕಲ್ಪಿಸಿದೆ.
ಉದಾಹರಣೆಗೆ ಹೇಳುವುದಾದರೆ, ಮನೆಯಲ್ಲಿ ನಾಲ್ಕು ಜನ ಸದಸ್ಯರಿದ್ದರೆ ತಮ್ಮ ಐದು ಎಕರೆ ಭೂಮಿಯನ್ನು ಯಾರಿಗೆ ಎಷ್ಟು ಭಾಗ ಎಂಬುದನ್ನು ನಿರ್ಧರಿಸಿ ಸ್ಕೆಚ್ ಸಿದ್ಧಪಡಿಸಬಹುದು. ಎಲ್ಲರೂ ಒಪ್ಪಿದ ನಂತರ ಸ್ಕೆಚ್ ಅನ್ನು ತಹಶಿಲ್ದಾರ್ ಕಚೇರಿಯ ಭೂ ದಾಖಲೆಗಳ ವಿಭಾಗಕ್ಕೆ ಅಪ್ಲೋಡ್ ಮಾಡಿದರೆ ಸಾಕು, ನೋಂದಣಿ ಇಲಾಖೆಯಲ್ಲಿ ಆ ಸ್ಕೆಚ್ ನ ಗಡಿಗಳಿಗೆ ಅನುಗುಣವಾಗಿ ನೋಂದಣಿ ಮಾಡಲಾಗುವುದು. ರೈತರಿಗೆ ಸ್ವಾವಲಂಬಿ ಆ್ಯಪ್ ಕೇವಲ ಪೋಡಿ ನಕ್ಷೆ ಅಷ್ಟೇ ಅಲ್ಲದೆ ಜಮೀನಿನ 11 ಇ, ಭೂ ಪರಿವರ್ತನೆ ಮತ್ತು ವಿಭಾಗ ಮಾಡಿಕೊಳ್ಳಲು ಸಹಾಯವಾಗುತ್ತದೆ.