Hubballi: ಸ್ಥಳ ಮಹಜರು ವೇಳೆ ಹಲ್ಲೆಗೆ ಯತ್ನಿಸಿ ಎಸ್ಕೇಪ್ ಆಗಲು ಯತ್ನಿಸಿದ್ದ ಮಂಗಳೂರಿನ ಇಬ್ಬರು ದರೋಡೆಕೋರರು – ಗುಂಡಿನ ರುಚಿ ತೋರಿಸಿದ ಪೊಲೀಸರು!!

Hubballi: ಮಂಗಳೂರಿನ ಇಬ್ಬರು ದರೋಡೆಕೋರರು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಮಹಜರು ವೇಳೆ ಪೊಲೀಸರಿಗೆ ಹಲ್ಲೆ ನಡೆಸಿ ಎಸ್ಕೇಪ್ ಆಗಲು ಯತ್ನಿಸಿದ್ದು, ಈ ವೇಳೆ ಹುಬ್ಬಳ್ಳಿ(Hubballi) ಪೊಲೀಸರು ಗುಂಡಿನ ರುಚಿ ತೋರಿಸಿದ್ದಾರೆ.

 

ಹೌದು, ಮಂಗಳೂರಿನ(Mangaluru) ಕುರ್ತಾ ಅಲಿಯಾಸ್ ಭರತ್ ಕುಮಾರ್ ಹಾಗೂ ಫಾರೂಕ್ ಅಲಿಯಾಸ್ ಟೊಮೆಟೊ ಫಾರೂಕ್ ಕಾರು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದರು. ಇವರ ಗ್ಯಾಂಗ್‌ನಲ್ಲಿ 15 ಜನರಿದ್ದು ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಹತ್ತಿರ ಮಹಾರಾಷ್ಟ್ರದ ಸಾಂಗ್ಲಿಯ ರಾಹುಲ್ ಸುರ್ವೆ ಎಂಬವರ ಕಾರು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಭರತ್‌ ಕುಮಾರ್‌ ಮತ್ತು ಫಾರೂಕ್‌ನನ್ನು ಹುಬ್ಬಳ್ಳಿಯ ಸಿಸಿಬಿ ಪೊಲೀಸರು ಮಂಗಳೂರಿನಿಂದ ಬಂಧಿಸಿ ಕರೆದುಕೊಂಡು ಹೋಗಿದ್ದರು. ಭಾನುವಾರ ಸ್ಥಳ ಮಹಜರು ಮಾಡುವ ವೇಳೆ ಎಸ್ಕೇಪ್ ಆಗಲು ಯತ್ನಿಸಿದ್ದರು.

ಭಾನುವಾರ ಸ್ಥಳ ಮಹಜರು ಮಾಡುವ ವೇಳೆ ಮಂಗಳೂರಿನ ಕುರ್ತಾ ಅಲಿಯಾಸ್ ಭರತ್ ಕುಮಾರ್ ಹಾಗೂ ಫಾರೂಕ್ ಅಲಿಯಾಸ್ ಟೊಮೆಟೊ ಫಾರೂಕ್ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಆರೋಪಿಗಳ ಕಾಲಿಗೆ ಸಿಸಿಬಿ ಪೊಲೀಸರು ಗುಂಡು ಹಾರಿಸಿದ್ದಾರೆ. ಅಧಿಕಾರಿಗಳು ಮೂರು ಸುತ್ತು ಗುಂಡು ಹಾರಿಸಿದ್ದು, ಆರೋಪಿಗಳು ಗಾಯಗೊಂಡಿದ್ದಾರೆ. ಫಾರೂಕ್‌ಗೆ ಎರಡು ಗುಂಡುಗಳು ತಗುಲಿದ್ದರೆ. ಭರತ್‌ಕುಮಾರ್‌ಗೆ ಕಾಲಿಗೆ ಒಂದು ಗುಂಡೇಟು ಬಿದ್ದಿದೆ. ಘಟನೆಯಲ್ಲಿ ಮೂವರು ಪೊಲೀಸ್ ಸಿಬ್ಬಂದಿಗೆ ಗಾಯವಾಗಿದೆ.

ಅಂದಹಾಗೆ ಗ್ಯಾಂಗ್‌ನಲ್ಲಿ ಮಂಗಳೂರು ಮತ್ತು ಕಾಸರಗೋಡು ಪರಿಸರದ ಇನ್ನೂ ಕೆಲವರು ಇರುವ ಶಂಕೆಯಿದ್ದು, ಅವರ ಪತ್ತೆಗೆ ಕೇರಳಕ್ಕೆ ನಾಲ್ಕು ತಂಡಗಳನ್ನು ರವಾನಿಸಲಾಗಿದೆ. ಈ ಗ್ಯಾಂಗ್ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಬೆಂಗಳೂರು ಮತ್ತು ಇತರ ಪ್ರದೇಶಗಳಲ್ಲಿ ಸಕ್ರಿಯವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave A Reply

Your email address will not be published.