ISKCON: ಹಿಂದೂಗಳ ಧ್ವನಿಯಾಗಿದ್ದ ಇಸ್ಕಾನ್‌ನ ಚಿನ್ಮಯ್ ಕೃಷ್ಣ ದಾಸ್ ಅರೆಸ್ಟ್!
ISKCON: ಬಾಂಗ್ಲಾದೇಶದಲ್ಲಿ (Bangladesh) ನೆಲೆಸಿರುವ ಚಿನ್ಮಯ್ ಕೃಷ್ಣ ದಾಸ್ ಬ್ರಹ್ಮಚಾರಿ ಅವರು ಹಿಂದೂ ಸಂಘಟನೆಯಾದ ಇಸ್ಕಾನ್ ಸಂಸ್ಥಾಪಕರಲ್ಲಿ ಒಬ್ಬರು ಮತ್ತು ಬಾಂಗ್ಲಾದೇಶದ ಹಿಂದೂ ಅಲ್ಪಸಂಖ್ಯಾತರ ಪ್ರಮುಖ ವಕೀಲರಾಗಿದ್ದಾರೆ. ಸನಾತನ ಜಾಗರಣ್ ಮಂಚ್, ಬಾಂಗ್ಲಾದೇಶ ಸನಾತನ ಜಾಗರಣ ಮಂಚ್ ವಕ್ತಾರರು ಮತ್ತು ಪುಂಡರೀಕ್ ಧಾಮದ ಪ್ರಾಂಶುಪಾಲರಾಗಿರುವ ಮತ್ತು ಹಿಂದೂ (Hindu) ಅಲ್ಪಸಂಖ್ಯಾತರ ಪ್ರಮುಖ ವಕೀಲ ಇಸ್ಕಾನ್ (ISKCON) ಸಂಸ್ಥೆಯ ಧಾರ್ಮಿಕ ನಾಯಕ ಚಿನ್ಮಯ್ ಕೃಷ್ಣ ದಾಸ್ ಬ್ರಹ್ಮಚಾರಿ (Chinmoy Krishna Das Brahmachari) ಅವರನ್ನು ಢಾಕಾ ವಿಮಾನ ನಿಲ್ದಾಣದಲ್ಲಿ (Dhaka Airport) ಬಂಧಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಧಾರ್ಮಿಕ ನಾಯಕ ಚಿನ್ಮಯ್ ಕೃಷ್ಣ ದಾಸ್ ಬ್ರಹ್ಮಚಾರಿ ಬಾಂಗ್ಲಾ ತೊರೆಯಲು ಮುಂದಾಗುತ್ತಿದ್ದಾಗ ಸೋಮವಾರ (ನ.25) ಅಧಿಕಾರಿಗಳು ಅವರನ್ನು ವಿಮಾನ ನಿಲ್ದಾಣದಲ್ಲಿ ತಡೆದರು ಮತ್ತು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಆದರೆ ಇವರ ಬಂಧನ ಬಗ್ಗೆ ಅಧಿಕಾರಿಗಳು ಇಲ್ಲಿಯವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಬಾಂಗ್ಲಾದೇಶ ರಾಜಧಾನಿಯಲ್ಲಿ ಹಿಂದೂಗಳನ್ನು ಸೇರಿಸಿ ಬೃಹತ್ ಪ್ರತಿಭಟನೆ ನಡೆಸಿದ್ದಕ್ಕೆ ಅವರನ್ನು ಬಂಧಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಬಾಂಗ್ಲಾದೇಶದಲ್ಲಿ ಹಿಂದೂಗಳು ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರದ ಬಗ್ಗೆ ಅವರು ಧ್ವನಿ ಎತ್ತಿದ್ದರು. ಮಾಜಿ ಪ್ರಧಾನಿ ಶೇಖ್ ಹಸೀನಾ ಅಧಿಕಾರದಿಂದ ಕೆಳಗಿಳಿದ ನಂತರ ದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ ನಡೆಯುತ್ತಿದೆ. ಮೊಹಮ್ಮದ್ ಯೂನಸ್ ಅವರ ಮಧ್ಯಂತರ ಸರ್ಕಾರವು ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರವನ್ನು ತಡೆಯಲು ವಿಫಲವಾಗಿದೆ ಎಂದು ಟೀಕಿಸಿದ್ದರು.
ಕಳೆದ ತಿಂಗಳು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಯಾರಾದರೂ ನಮ್ಮನ್ನು ಈ ದೇಶದಿಂದ ಹೊರಹಾಕಿ ಶಾಂತಿಯಿಂದ ಬದುಕಬಹುದು ಎಂದು ಬಯಸಿದರೆ ಇಲ್ಲಿ ಪ್ರಜಾಪ್ರಭುತ್ವ ಇರುವುದಿಲ್ಲ. ನಮ್ಮ ದೇಶ ಅಫ್ಘಾನಿಸ್ತಾನ ಅಥವಾ ಸಿರಿಯಾ ಆಗುತ್ತದೆ ಎಂದು ಹೇಳಿದ್ದರು.