By Election : 3 ಕ್ಷೇತ್ರಗಳಲ್ಲೂ ಬಿಜೆಪಿಗೆ ಹೀನಾಯ ಸೋಲು – ಸೋಲಿಗೆ ಈ 7 ಅಂಶಗಳೇ ಪ್ರಮುಖ ಕಾರಣ!!
By Election : ರಾಜ್ಯದ ಮೂರು ವಿಧಾನಸಭೆ ಮತಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ(By Election )ಕಾಂಗ್ರೆಸ್ ಜಯಭೇರಿ ಬಾರಿಸಿ ಮೈತ್ರಿ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಗೆ ದೊಡ್ಡ ಆಘಾತ ನೀಡಿದೆ. ಮೂರಲ್ಲದಿದ್ದರೂ ಎರಡಾದರೂ ಗೆಲ್ಲುತ್ತೇವೆ ಎಂದು ಬೇಗುತ್ತಿದ್ದ ಬಿಜೆಪಿಗೆ ಗರ್ವಭಂಗವಾಗಿದೆ. ಅಲ್ಲದೆ ಬಿಜೆಪಿ ಜೆಡಿಎಸ್ ಮಿತ್ರಪಕ್ಷಗಳ ಇಬ್ಬರು ಮಾಜಿ ಸಿಎಂಗಳ (ಹಾಲಿ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ) ಮಕ್ಕಳನ್ನೇ ಗೆಲ್ಲಿಸಿಕೊಂಡು ಬರಲಾಗದೆ ಮುಜುಗರಕ್ಕೆ ಒಳಗಾಗಿರುವುದು ನಿಜ. ಹಾಗಾದರೆ ಬಿಜೆಪಿ ಸೋಲಿಗೆ ಕಾರಣವೇನು? ಮೈತ್ರಿ ಪಕ್ಷಗಳು ಎಡವುತ್ತಿರುವುದಾದರೂ ಎಲ್ಲಿ? ಇಲ್ಲಿದೆ ನೋಡಿ ವಿಶ್ಲೇಷಣೆ.
1. ಪ್ರಭಾವಿ ನಾಯಕತ್ವದ ಕೊರತೆ:
ಬಿಜೆಪಿಯ ರಾಷ್ಟ್ರೀಯ ನಾಯಕರಿಗೆ ಕರ್ನಾಟಕದಲ್ಲಿ ಪಕ್ಷವನ್ನು ಮುನ್ನಡೆಸುವ ಪ್ರಭಾವಿ ನಾಯಕ ಸಿಗದೇ ಬಿವೈ ವಿಜಯೇಂದ್ರ ಗೆ ಪಕ್ಷದ ಚುಕ್ಕಾಣಿ ಕೊಟ್ಟಿದ್ದರು. ಪಕ್ಷ ಕಟ್ಟಲು ವಿಜಯೇಂದ್ರ ಬೆವರು ಸುರಿಸುತ್ತಿದ್ದಾರೆ. ತನು, ಮನ ಮತ್ತು ಧನ ಅರ್ಪಿಸಿ ಶ್ರಮಿಸುತ್ತಿದ್ದಾರೆ ಎಂಬುದೇನೋ ನಿಜ. ಹಾಗೆ ನೋಡಿದರೆ, ಅವರಲ್ಲಿ ಕೆಲವು ತುಂಬಾ ಒಳ್ಳೆಯ ಗುಣಗಳಿವೆ. ಮಾತು ಕಡಿಮೆ. ಅದರಲ್ಲಿಯೂ ಪಕ್ಷದ ಸಿದ್ಧಾಂತವನ್ನು ವಿರೋಧಿಸುವವರನ್ನು ಅವರು ಘಾಸಿಗೊಳಿಸದೇ ಟೀಕಿಸುತ್ತಾರೆ! ಇವೆಲ್ಲ ಮೆಚ್ಚಬೇಕಾದದ್ದೇ. ಆದರೆ, ಅದು ಸಾಕಾಗಿಲ್ಲ ಎಂಬುದಕ್ಕೆ ಇಂದಿನ ಉಪಚುನಾವಣೆ ಸಾಕ್ಷಿ. ಕಾರಣ ಹಲವಾರು ಇರಬಹುದು; ಅವರಿಗೆ ಎಲ್ಲರನ್ನೂ ಒಳಗೊಂಡು ಕರೆದುಕೊಂಡು ಹೋಗುವ ಗುಣ ಇನ್ನೂ ಸಿದ್ಧಿಸಿಲ್ಲ. ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ.
ಇನ್ನು ಎಲ್ಲದಕ್ಕಿಂತ ಮುಖ್ಯವಾಗಿ, ಅವರ ಬಗ್ಗೆ ಬರೀ ಪಕ್ಷದವರಿಗೆ ಮಾತ್ರ ಅಲ್ಲ, ಹೊರಗಿನವರಿಗೂ ಒಂದು ಸಂಶಯವಿದೆ: ಅವರದ್ದು ಹೊಂದಾಣಿಕೆ ರಾಜಕಾರಣ (Adjustment Politics) ಎಂಬುದು. ಅಂದರೆ, ಕಾಂಗ್ರೆಸ್ ಪಕ್ಷದ ಕೆಲವು ನಾಯಕರ ಜೊತೆ ಒಳ ಒಪ್ಪಂದ ಯಾವಾಗಲೂ ಮಾಡಿದ ನಂತರವೇ ತಮ್ಮ ಪಕ್ಷದ ತಂತ್ರ ಹೆಣೆಯುತ್ತಾರೆ, ಎಂದು ಸ್ವಪಕ್ಷದ ನಾಯಕರೇ ಆರೋಪಿಸಿದ್ದಾರೆ. ಈ ಅಪವಾದದಿಂದ ಹೊರಬರದಿದ್ದರೆ, ಬಿಜೆಪಿ ರಾಷ್ಟ್ರೀಯ ನಾಯಕರು ಕರ್ನಾಟಕದ ಬಗ್ಗೆ ಜಾಸ್ತಿ ನಿರೀಕ್ಷೆ ಇಟ್ಟುಕೊಳ್ಳುವುದು ದುರಾಸೆ ಆಗಬಹುದು ಮತ್ತು ಕರ್ನಾಟಕದಲ್ಲಿ ಪಕ್ಷ ಬೆಳೆಯುತ್ತಿದೆ ಎಂಬ ಹುಸಿ ನಿರೀಕ್ಷೆಯಲ್ಲಿದ್ದಂತಾಗುತ್ತದೆ.
2. ವಿಷಯ ಆಯ್ಕೆಯಲ್ಲಿ ಕೊರತೆ
ವಿಷಯ ಎತ್ತಿಕೊಳ್ಳುವುದರಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ. ಕಾಂಗ್ರೆಸ್ ಸರಕಾರದಲ್ಲಿ ಬೇಕಾದಷ್ಟು ವೈಫಲ್ಯಗಳಿದ್ದರೂ ಯಾವ ವಿಷಯವನ್ನು ಎತ್ತಿಕೊಳ್ಳಬೇಕು? ಯಾವ ರೀತಿ ಎತ್ತಿಕೊಳ್ಳಬೇಕು ಎನ್ನುವುದನ್ನು ನಿರ್ಣಯಿಸಲು ಬಿಜೆಪಿ ಸಂಪೂರ್ಣ ವಿಫಲವಾಗಿದೆ.
3. ಗಂಭೀರತೆ ಇಲ್ಲದ ಆರ್ ಅಶೋಕ್ ಮಾತುಗಳು:
ಆರ್.ಅಶೋಕ ಅವರ ಮಾತುಗಳಿಗಂತೂ ಗಂಭೀರತೆಯೇ ಇಲ್ಲ. ಅವರ ಎಷ್ಟೋ ಟ್ವೀಟ್ ಗಳು ಕಾಂಗ್ರೆಸ್ ಗೆ ಅಸ್ತ್ರವಾಗಿ ಪರಿಣಮಿಸುತ್ತಿವೆ. ತಾವೇ ಹಗ್ಗಕೊಟ್ಟು ಕೈ ಕಟ್ಟಿಸಿಕೊಳ್ಳುವಂತೆ ಟ್ವೀಟ್ ಮಾಡುತ್ತಿದ್ದಾರೆ. ತಮ್ಮದೇ ಸರಕಾರ ಮಾಡಿದ್ದ ಆದೇಶಗಳನ್ನೂ ಕಾಂಗ್ರೆಸ್ ಮೇಲೆ ಹಾಕಲು ಹೋಗಿ ಎಡವಿದ್ದಿದೆ. ಅವರ ಎಷ್ಟೋ ನಡವಳಿಕೆಗಳು ಆಡಳಿತ ಪಕ್ಷದೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೇನೋ ಎನ್ನುವ ರೀತಿಯಲ್ಲಿ ಘೋಚರಿಸುತ್ತದೆ.
5. ಕಾಂಗ್ರೆಸ್ ಹಗರಣಗಳನ್ನು ಕೈಗೆತ್ತಿಕೊಳ್ಳುವಲ್ಲಿ ಸಂಪೂರ್ಣ ವಿಫಲ:
ಕಾಂಗ್ರೆಸ್ ಹಗರಣಗಳನ್ನು ಕೈಗೆತ್ತಿಕೊಳ್ಳಲು ಬಿಜೆಪಿ ಸಂಪೂರ್ಣ ವಿಫಲವಾಗಿದೆ. ಪ್ರತಿಭಟನೆಗಳು ನಡೆದರೂ ಅದು ಕೆಲವೇ ಕೆಲವು ಬಿಜೆಪಿ ನಾಯಕರಿಗೆ ಸೀಮಿತವಾಗಿದೆ. ವಾಲ್ಮೀಕಿ ನಿಗಮದ ಹಗರಣ, ವಕ್ಫ ಹಗರಣ, ಮುಡಾ ಪ್ರಕರಣ ಮೊದಲಾದ ದೊಡ್ಡ ದೊಡ್ಡ ವಿಷಯಗಳಿದ್ದರೂ ಜನಾಂದೋಲನ ರೂಪಿಸಲು ಆಗಲೇ ಇಲ್ಲ.
6. ಕುಟುಂಬ ರಾಜಕಾರಣವನ್ನು ವಿರೋಧಿಸುವ ನಾಟಕ:
ಕಾಂಗ್ರೆಸ್ ನ ಕುಟುಂಬ ರಾಜಕಾರಣವನ್ನು ವಿರೋಧಿಸುವ ಬಿಜೆಪಿ ಶಿಗ್ಗಾವಿಯಲ್ಲಿ ಬಸವರಾಜ ಬೊಮ್ಮಾಯಿ ಮಗನಿಗೆ ಟಿಕೆಟ್ ಕೊಟ್ಟಿದ್ದು, ಕುಟುಂಬ ರಾಜಕಾರಣದ ಮೇಲೆಯೇ ನಿಂತಿರುವ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದು ಪಕ್ಷದ ಬಹುತೇಕ ನಾಯಕರು ಮತ್ತು ಕಾರ್ಯಕರ್ತರ ಅಸಹನೆಗೆ ಕಾರಣವಾಗಿದೆ. ಜನರೂ ಅದನ್ನು ಒಪ್ಪಲಿಲ್ಲ.
7. ವಕ್ಫ ಬೋರ್ಡ್ ಹಗರಣವನ್ನು ಎತ್ತಿ ತೋರಿಸುವಲ್ಲಿ ವಿಫಲ :
ವಕ್ಫ ಬೋರ್ಡ್ ಹಗರಣವನ್ನು ಕೈಗೆತ್ತಿಕೊಂಡಿರುವ ರೀತಿಯೇ ಸರಿ ಇಲ್ಲ. ಅದರಿಂದ ಅನ್ಯಾಯವಾಗಿದ್ದು ಕೇವಲ ಹಿಂದೂಗಳಿಗಷ್ಟೇ ಅಲ್ಲ, ಮುಸ್ಲಿಮರಿಗೂ ಬಹಳ ದೊಡ್ಡ ಮಟ್ಟದಲ್ಲಿ ಅನ್ಯಾಯವಾಗಿದೆ. ಮುಸ್ಲಿಮರನ್ನು ಟಾರ್ಗೆಟ್ ಮಾಡಲು ಹೋಗಿ ಅವರು ಒಗ್ಗಟ್ಟಾಗುವಂತೆ ಮಾಡಿದರು. ಬದಲಿಗೆ, ಅನ್ಯಾಯಕ್ಕೊಳಗಾಗಿರುವ ಮುಸ್ಲಿಮರನ್ನೂ ಸೇರಿಸಿಕೊಂಡು ಹೋರಾಟ ನಡೆಸಿದರೆ ಅದಕ್ಕೆ ಬಲ ಬರುತ್ತಿತ್ತು.