ISRO: ಮಸ್ಕ್ ಮಾಲೀಕತ್ವದ ಸ್ಪೇಸ್ ಎಕ್ಸ್ ರಾಕೆಟ್: ಇಸ್ರೋ ಉಪಗ್ರಹ ಉಡಾವಣೆ ಯಶಸ್ವಿ!
ISRO: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇದೇ ಮೊದಲ ಬಾರಿಗೆ ವಿಶ್ವದ ಶ್ರೀಮಂತ ಉದ್ಯಮಿ ಎಲೋನ್ ಮಸ್ಕ್ (Elon Musk) ಮಾಲೀಕತ್ವದ ಸ್ಪೇಸ್‌ಎಕ್ಸ್ (Space X) ಕಂಪನಿಯ ರಾಕೆಟ್ ಬಳಸಿ ಉಪಗ್ರಹವನ್ನು ಸರಿಯಾದ ಕಕ್ಷೆಗೆ ಸೇರಿಸಿದೆ.
ಹೌದು, ಇಸ್ರೋದ ಜಿಸ್ಯಾಟ್ -20 ಸಂವಹನ ಉಪಗ್ರಹವನ್ನು ಹೊತ್ತುಕೊಂಡಿದ್ದ ಸ್ಪೇಸ್‌ಎಕ್ಸ್‌ನ ಫಾಲ್ಕನ್ 9 ರಾಕೆಟ್ (Space X Falcon 9 Rocket) ಭಾರತೀಯ ಕಾಲಮಾನ ಸೋಮವಾರ ರಾತ್ರಿ 23:45ಕ್ಕೆ ಅಮೆರಿಕದ ಫ್ಲೋರಿಡಾ ರಾಜ್ಯದ ಕೇಪ್ ಕೆನವೆರಲ್ ಉಡಾವಣಾ ಕೇಂದ್ರದಿಂದ ಉಡಾವಣೆಗೊಂಡ 34 ನಿಮಿಷದಲ್ಲಿ ರಾಕೆಟ್ ಉಪಗ್ರಹವನ್ನು ಕಕ್ಷೆಗೆ ಯಶಸ್ವಿಯಾಗಿ ಸೇರಿಸಿದೆ.
ಈ ಬಗ್ಗೆ ಬೆಂಗಳೂರಿನ ಯುಆರ್ ರಾವ್ ಉಪಗ್ರಹ ಕೇಂದ್ರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಇಸ್ರೋ ಅಧ್ಯಕ್ಷ ಸೋಮನಾಥ್, ಜಿಸ್ಯಾಟ್-20 ಮಿಷನ್ ಅವಧಿ 14 ವರ್ಷ. ಅತ್ಯಂತ ಯಶಸ್ವಿಯಾಗಿ ಉಡಾವಣೆಯಾಗಿದೆ ಯಾಕೆಂದರೆ ನಾವು ಉತ್ತಮ ಕಕ್ಷೆಯನ್ನು ಪಡೆದುಕೊಂಡಿದ್ದೇವೆ. ಉಪಗ್ರಹವು ಆರೋಗ್ಯಕರವಾಗಿದ್ದು ಸೌರ ಫಲಕಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಇಸ್ರೋ ಮತ್ತು ಸ್ಪೇಸ್‌ಎಕ್ಸ್ ನಡುವಿನ ಅನೇಕ ವಾಣಿಜ್ಯ ಸಹಯೋಗಗಳಲ್ಲಿ ಇದು ಮೊದಲನೆಯದು. ಇನ್ನು ಫಾಲ್ಕನ್ 9 ಮರುಬಳಕೆ ಮಾಡಬಹುದಾದ ರಾಕೆಟ್ ಆಗಿದೆ. ಇಲ್ಲಿಯವರೆಗೆ 19 ಬಾರಿ ಈ ರಾಕೆಟ್ ಮೂಲಕ ಉಪಗ್ರಹವನ್ನು ಉಡಾವಣೆ ಮಾಡಲಾಗಿತ್ತು. ಮೊದಲ ಹಂತ ಬೇರ್ಪಟ್ಟ ನಂತರ ಅಟ್ಲಾಂಟಿಕ್ ಸಾಗರದಲ್ಲಿ ನೆಲೆಗೊಂಡಿದ್ದ ಡ್ರೋನ್ ಹಡಗಿನಲ್ಲಿ ಲ್ಯಾಂಡ್ ಆಗಿದೆ.
ಉಡಾವಣೆ ಸಂಬಂಧವಾಗಿ ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್‌ಎಸ್‌ಐಎಲ್) ಸ್ಪೇಸ್‌ಎಕ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. GSAT-N2 ಅಥವಾ GSAT-20 ಹೆಸರಿನ ಉಪಗ್ರಹವು ಭಾರತದಲ್ಲಿ ವಿಮಾನದಲ್ಲಿ ಇಂಟರ್ನೆಟ್ ಸೇವೆಗಳನ್ನು ಒದಗಿಸಲಿದೆ. ಸದ್ಯ ಈಗ ಭಾರತದಲ್ಲಿ ವಿಮಾನದ ಒಳಗಡೆ ಇಂಟರ್ನೆಟ್ ಸೇವೆಗೆ ನಿಷೇಧವಿದೆ. ಈ ಸೇವೆಯನ್ನು ಒದಗಿಸುವ ವಿಮಾನಯಾನ ಸಂಸ್ಥೆಗಳು ಭಾರತೀಯ ವಾಯುಪ್ರದೇಶದ ಮೇಲೆ ಹಾರುವಾಗ ಅದನ್ನು ನಿಷ್ಕ್ರಿಯಗೊಳಿಸಬೇಕಾಗುತ್ತದೆ.
ಭಾರತ ಸರ್ಕಾರವು ನವೆಂಬರ್ 4 ರಂದು ನಿಯಮಗಳನ್ನು ತಿದ್ದುಪಡಿ ಮಾಡಿದೆ. ಭಾರತೀಯ ವಾಯುಪ್ರದೇಶ ಒಳಗಡೆ ವಿಮಾನದಲ್ಲಿ 3,000 ಮೀಟರ್ ಎತ್ತರವನ್ನು ತಲುಪಿದ ನಂತರ ವಿಮಾನದಲ್ಲಿ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸಲು ಅನುಮತಿಸಿದಾಗ ಮಾತ್ರ ವಿಮಾನದಲ್ಲಿನ ಪ್ರಯಾಣಿಕರು ವೈಫೈ ಮೂಲಕ ಇಂಟರ್ನೆಟ್ ಸೇವೆಗಳನ್ನು ಬಳಸಲು ಸಾಧ್ಯವಾಗಲಿದೆ.
ಮುಖ್ಯವಾಗಿ ಭಾರತದ ಅತಿದೊಡ್ಡ ಉಡಾವಣಾ ನೌಕೆ ಎಂದೇ ಖ್ಯಾತಿ ಪಡೆದಿರುವ ʼಬಾಹುಬಲಿ’ ಜಿಎಸ್‌ಎಲ್‌ವಿ ಮಾರ್ಕ್-3 ಗರಿಷ್ಠ 4,100 ಕೆ.ಜಿ. ತೂಕದ ಉಪಗ್ರಹವನ್ನು ಮಾತ್ರ ಹಾರಿಸುವ ಸಾಮರ್ಥ್ಯ ಹೊಂದಿದೆ. ಸ್ಯಾಟ್-20 ಉಪಗ್ರಹವು ಬರೋಬ್ಬರಿ 4,700 ಕೆ.ಜಿ. ತೂಕವಿರುವುದರಿಂದ ಇಸ್ರೋ ಫಾಲ್ಕನ್ 9 ರಾಕೆಟ್ ಬಳಸುತ್ತಿದೆ. ಫಾಲ್ಕನ್ 9 ಗರಿಷ್ಠ 22,800 ಕೆಜಿ ತೂಕದ ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಸಾಮರ್ಥ್ಯ ಹೊಂದಿದೆ ಎಂದಿದ್ದಾರೆ.