Mobile: ಮಕ್ಕಳ ಕೈಯಲ್ಲಿ ಮೊಬೈಲ್ ಕೊಟ್ಟು 14 ಲಕ್ಷ ರೂ. ಕಳೆದುಕೊಂಡ ನಿವೃತ್ತ ನೌಕರ
Mobile: ಮಕ್ಕಳ ಕೈಯಲ್ಲಿ ಮೊಬೈಲ್ (Mobile) ಕೊಟ್ಟು ಸಿಂದಗಿ ಪಟ್ಟಣದ ಬಸವರಾಜ್ ಹವಾಲ್ದಾರ್ ಎಂಬ ನಿವೃತ್ತ ನೌಕರರೊಬ್ಬರು 14 ಲಕ್ಷ ರೂ. ಕಳೆದುಕೊಂಡಿದ್ದಾರೆ. ಹೌದು, ಸಿಂದಗಿ ಪಟ್ಟಣದ ಬಸವರಾಜ್ ಹವಾಲ್ದಾರ್ ಅವರ ಖಾತೆಯಿಂದ ಸೈಬರ್ ಖದೀಮರು 14 ಲಕ್ಷ ರೂಪಾಯಿಗಳನ್ನು ಲಪಟಾಯಿಸಿದ್ದಾರೆ.
ಮಾಹಿತಿ ಪ್ರಕಾರ ಬಸವರಾಜ ಹವಾಲ್ದಾರ್ ಮತ್ತು ಅವರ ಪತ್ನಿಯ ಜಂಟಿ ಖಾತೆಯಲ್ಲಿದ್ದ 14 ಲಕ್ಷ ರೂ. ಸೈಬರ್ ಕಳ್ಳರು ದೋಚಿದ್ದಾರೆ. ಖಾತೆಯಲ್ಲಿದ್ದ 14ಲಕ್ಷ ಹೋದ ತಕ್ಷಣ,ಬಸವರಾಜ ಅವರು ವಿಜಯಪುರ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಂತರ, ಬ್ಯಾಂಕ್ ಖಾತೆಯನ್ನು ಲಾಕ್ ಮಾಡಿಸಿದ್ದಾರೆ.
ಈ ಪ್ರಕರಣದ ತನಿಖೆ ನಡೆಸಿದ ಸಿಇಎನ್ ಪೊಲೀಸರು, ಬಸವರಾಜ ಅವರ ಮೊಬೈಲ್ ಪರಿಶೀಲಿಸಿದಾಗ ಎಪಿಕೆ ಪೈಲ್ ಮೂಲಕ ಆ್ಯಪ್ ಡೌನ್ಲೋಡ್ ಮಾಡಿದ್ದನ್ನು ಕಂಡಿದ್ದಾರೆ. ನಂತರ, ತಜ್ಞರಿಂದ ಪರಿಶೀಲನೆ ನಡೆಸಿದಾಗ, ಎಪಿಕೆಯಿಂದ ಡೌನ್ಲೋಡ್ ಮಾಡಿಕೊಂಡ ಆ್ಯಪ್ನಿಂದಲೇ ಹಣ ದೋಚಲಾಗಿದೆ ಎಂಬುವುದನ್ನು ತಿಳಿದಿದ್ದಾರೆ.
ಪೊಲೀಸ್ ಆಧಿಕಾರಿಗಳ ಪ್ರಕಾರ ಎಪಿಕೆ ಫೈಲ್ ಮೂಲಕ ಹ್ಯಾಕರಗಳು ಆ್ಯಪ್ಗಳನ್ನು ಕಳುಹಿಸುತ್ತಾರೆ. ಎಪಿಕೆ ಪೈಲ್ ಓಪನ್ ಮಾಡಿ ಅದರಲ್ಲಿರುವ ಆ್ಯಪ್ ಡೌನ್ಲೋಡ್ ಮಾಡಿದರೆ ಸಾಕು. ಸೈಬರ್ ಕಳ್ಳರು ಹಣ ದೋಚಲು ಕ್ಷಣ ಮಾತ್ರ ಸಾಕಾಗುತ್ತದೆ. ಅಂತೆಯೇ ಮಕ್ಕಳ ಕೈಯಲ್ಲಿ ಮೊಬೈಲ್ ಇದ್ದಾಗ ಅಪಾಯಕಾರಿ ಎಪಿಕೆ ಫೈಲ್ಗಳು ಆನಲೈನ್ ಮೂಲಕ ಬರುತ್ತವೆ. ಗೇಮ್ ಆಡುವಾಗ ವಿಡಿಯೋ ನೋಡುವಾಗ, ಬರುವ ಎಪಿಕೆ ಫೈಲ್ಗಳನ್ನು ಮಕ್ಕಳು ಡೌನ್ಲೋಡ್ ಮಾಡಿದರೆ ಈ ರೀತಿ ಆಗುತ್ತೆ. ಬಸವರಾಜ ಹವಾಲ್ದಾರ್ ಪ್ರಕರಣದಲ್ಲೂ ಇದೇ ಆಗಿದ್ದು.
ಪ್ರಕರಣ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ಮಾತನಾಡಿ, ಎಪಿಕೆ ಪೈಲ್ಗಳು ಡೌನ್ಲೋಡ್ ಆಗುವ ಸಾಧ್ಯತೆ ಇರುತ್ತದೆ. ಬಳಿಕ ನಿಮ್ಮ ಮೊಬೈಲ್, ಬ್ಯಾಂಕ್ಗಳು ಹ್ಯಾಕ್ ಆಗುವ ಸಾಧ್ಯತೆ ಇರುತ್ತವೆ. ಹೀಗಾಗಿ ಮಕ್ಕಳ ಕೈಯಲ್ಲಿ ಮೊಬೈಲ್ ನೀಡಬೇಡಿ ಎಂದು ಮನವಿ ಮಾಡಿದ್ದಾರೆ.