Mangalore: ಉಳ್ಳಾಲ; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ ಆರೋಪ-ವ್ಯಕ್ತಿಗೆ ಹಲ್ಲೆ, ಕೇಸು ದಾಖಲು
Ullala: ಉಚ್ಚಿಲ ಬಟ್ಟಪ್ಪಾಡಿಯಲ್ಲಿ ತಿಂಗಳುಗಳ ಹಿಂದೆ ಅಕ್ರಮ ಮರಳುಗಾರಿಕೆಗೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಆರೋಪ ಮಾಡಿ ವ್ಯಕ್ತಿಯೊಬ್ಬರಿಗೆ ಸಲಾಕೆಯಿಂದ ಹಲ್ಲೆಗೈಯ್ದು ಚಾಕುವಿನಿಂದ ಇರಿಯಲು ಯತ್ನ ಮಾಡಿರುವ ಘಟನೆಯೊಂದು ನಡೆದಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.
ಈ ಘಟನೆ ಸೋಮೇಶ್ವರ ಪುರಸಭಾ ಕಚೇರಿಯ ಬಳಿ ಸೋಮವಾರ (ನ.4) ರಂದು ನಡೆದಿದೆ.
ಸೋಮೇಶ್ವರ ಉಚ್ಚಿಲದ, ಫಿಶರಿಸ್ ರೋಡ್ ನಿವಾಸಿ ಸೋಮೇಶ್ವರ ಸೋಮನಾಥ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಸದಸ್ಯ ಕಿಶೋರ್ ಎಂ ಉಚ್ಚಿಲ (53) ಹಲ್ಲೆಗೊಳಗಾದ ವ್ಯಕ್ತಿ. ಕಿಶೋರ್ ಅವರು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಉಚ್ಚಿನ ಬಟ್ಟಪ್ಪಾಡಿ ಪ್ರದೇಶದಲ್ಲಿ ಅಕ್ರಮ ಮರಳುಗಾರಿಕೆ ಮಾಡುತ್ತಿರುವ ಸುನೀಲ್ ಪೂಜಾರಿ ಹಲ್ಲೆಗೈದ ವ್ಯಕ್ತಿ ಎಂದು ಆರೋಪಿಸಲಾಗಿದೆ.
ಕಿಶೋರ್ ತಮ್ಮ ಸ್ನೇಹಿತ ಪುಷ್ಪರಾಜ್ ಜೊತೆ ಸೋಮವಾರ ಸೋಮೇಶ್ವರದ ಹೊಟೇಲ್ ನಲ್ಲಿ ಚಹಾ ಕುಡಿದು ಸ್ಕೂಟರ್‌ನಲ್ಲಿ ಸವಾರನಾಗಿ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಸೋಮೇಶ್ವರ ಪುರಸಭಾ ಕಚೇರಿ ಬಳಿ ಆರೋಪಿ ಸುನೀಲ್ ಪೂಜಾರಿ ಸ್ಕೂಟರ್ ತಡೆದಿದ್ದು, ಮರಳುಗಾರಿಕೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡುತ್ತೀಯ ಎಂದು ಬೆದರಿಕೆ ಹಾಕಿದ್ದಾನೆ. ನಂತರ ಭುಜ ಮತ್ತು ಸೊಂಟಕ್ಕೆ ಹಲ್ಲೆ ನಡೆಸಿದ್ದಾನೆ.
ಆ ಬಳಿಕ ತನ್ನ ಸೊಂಟದಿಂದ ಚಾಕುವೊಂದನ್ನು ಹೊರತೆಗೆದು ಇರಿಯಲು ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ ಸ್ನೇಹಿತ ಪುಷ್ಪರಾಜ್ ಸ್ಕೂಟರನ್ನು ವೇಗವಾಗಿ ಚಲಾಯಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದೇನೆ ಎಂದು ಕಿಶೋರ್ ತಾವು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಉಳ್ಳಾಲ ಠಾಣೆಯಲ್ಲಿ ಆರೋಪಿ ಸುನೀಲ್ ಪೂಜಾರಿ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.